ಕನ್ನಡ ನಾಮಫಲಕ ಹಾಕದಿದ್ದರೆ ಭಾರಿ ದಂಡ
ಬೆಂಗಳೂರು, ಜು. 8 : ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂದು ಹೇಳಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಂಗಡಿಗಳು, ಕೈಗಾರಿಕೆಗಳ ಮುಂದೆ ಕನ್ನಡ ನಾಮಫಲಕಗಳ ಅಳವಡಿಸದಿದ್ದರೇ 10 ಸಾವಿರ ರುಪಾಯಿಗಳ ದಂಡ ಮತ್ತು ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಚೇರಿಗಳ ಮಂದೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಾಮಫಲಕಗಳಿರಬೇಕು. ರಾಜ್ಯ ಸರ್ಕಾರದ ಸಂಸ್ಥೆಗಳು, ಅಂಗಡಿ, ಮಳಿಗೆಗಳ ಮುಂದೆ ಕಡ್ಡಾಯವಾಗಿ ಕನ್ನಡ ನಾಮಫಲಕವಿರಬೇಕು. ಇಲ್ಲವಾದರೆ 10 ಸಾವಿರ ದಂಡ ವಿಧಿಸಲಾಗುತ್ತಿದೆ. ದಂಡದ ನಂತರವೂ ನಿಯಮ ಉಲ್ಲಂಘನೆ ಮುಂದುವರೆದರೆ ಅಂಗಡಿ ಅಥವಾ ಕಂಪನಿಯ ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ. ಈ ಸಂಬಂಧ ಕಾನೂನಿಗೆ ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಹೇಳಿದರು.
ಕನ್ನಡ ಭಾಷೆಯನ್ನು ಆಡಳಿತಕ್ಕೆ ತರದಿರುವ ಅಧಿಕಾರಿಗಳನ್ನು ಸರ್ಕಾರ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡವನ್ನು ತಿರಸ್ಕರಿಸುವ ಅಧಿಕಾರಿಗಳನ್ನು ಸರ್ಕಾರವೂ ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
