ಚೀನಾದಲ್ಲಿ ಭೀಕರ ಭೂಕಂಪ, 5 ಸಾವಿರಕ್ಕೂ ಹೆಚ್ಚು ಸಾವು
ಬೀಜಿಂಗ್, ಮೇ 12 : ಓಲಂಪಿಕ್‌ಗಾಗಿ ಕ್ಷಣಗಣನೆ ಪ್ರಾರಂಭವಾದ ಹೊತ್ತಿನಲ್ಲೇ ನೈರುತ್ಯ ಚೀನಾದ ಸೀಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿರುವ ಭೀಕರ ಭೂಕಂಪ 5 ಸಾವಿರಕ್ಕೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿದ್ದು, ಓಲಂಪಿಕ್ ಮೇಲೆ ಕರಿನೆರಳು ಹಾಸುವಂತೆ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 7.8ರಷ್ಟಿದ್ದ ಪ್ರಬಲ ಭೂಕಂಪದಲ್ಲಿ ನೂರಾರು ಕಟ್ಟಡಗಳು ನೆಲಸಮವಾಗಿವೆ. ಡುಜಿಯಾಂಗ್‌ನ ಶಾಲೆಯ ಕಟ್ಟಡವೊಂದು ಸಂಪೂರ್ಣ ನಾಶವಾಗಿದ್ದರಿಂದ 900 ಮಕ್ಕಳು ಕಟ್ಟಡದ ಅಡಿಯಲ್ಲಿ ಹೂತುಹೋಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂದು ಅಂದಾಜು ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದಾರೆ.
11.58ಕ್ಕೆ ಸಂಭವಿಸಿದ ಕಂಪನದಿಂದ ಭೀತಿಗೊಳಗಾದ ಬೀಜಿಂಗ್ ಮತ್ತು ಶಾಂಘೈ ನಗರದ ಜನ ಮನೆ, ಕಚೇರಿಗಳಿಂದ ಹೊರಗೋಡಿಬಂದರು. ಶಾಂಘೈನಲ್ಲಿರುವ ಚೀನಾದ ಅತೀ ಎತ್ತರದ ಕಟ್ಟಡ ಜಿನಾಮೊ ಟವರ್‌ನಿಂದ ಕೂಡ ಜನರನ್ನು ಕೂಡಲೆ ಹೊರಕಳುಹಿಸಲಾಯಿತು. ಕಂಪನದ ಅನುಭವ ಪಾಕಿಸ್ತಾನ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲೂ ಆಗಿದೆ.
ಭೂಕಂಪದ ಕೇಂದ್ರಬಿಂದು ಸೀಚುವಾನ್‌ನ ರಾಜಧಾನಿ ಚೆಂಗ್ಡುನಿಂದ 93 ಕಿ.ಮೀ. ದೂರದಲ್ಲಿರುವ ವೆಂಚುವಾನ್‌ನಲ್ಲಿದೆ. ವೆಂಚುವಾನ್‌ನಲ್ಲಿ ಮಿಲಿಟರಿ ಟ್ರೂಪ್‌ಗಳು ಸಮರೋಪಾದಿಯಲ್ಲಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ. ಚೀನಾದ ಪ್ರಧಾನಮಂತ್ರಿ ವೆನ್ ಜಿಯಾಬೊ ಕೂಡ ಜನರ ರಕ್ಷಣೆಗೆ ವೆಂಚುವಾನ್‌ಗೆ ಧಾವಿಸಿದ್ದಾರೆ.
ಸೀಚುವಾನಿ ಪ್ರಾಂತ್ಯದ ಡುಜಿಯಾಂಗ್ಯಾನ್ ನಗರದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಕಟ್ಟಡದ ಅಡಿಗಳಲ್ಲಿ ಸಿಲುಕಿಕೊಂಡಿರುವ ನೂರಾರು ಜನ ಹೊರಬರಲು ಒದ್ದಾಡುತ್ತಿದ್ದರು. ಸಹಾಯಕ್ಕಾಗಿ ಸಾವಿರಾರು ಜನ ದೂರವಾಣಿ ಕರೆಗಳನ್ನು ಮಾಡಿದ್ದರಿಂದ ದೂರವಾಣಿ ವ್ಯವಸ್ಥೆ ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಂಚಾರ ವ್ಯವಸ್ಥೆ ಕೂಡ ತೀರ ಹದಗೆಟ್ಟಿದ್ದು ನೀರಿನ ಪೈಪುಗಳು ಒಡೆದಿರುವುದರಿಂದ ಅನೇಕ ಸ್ಥಳಗಳು ಜವಾವೃತವಾಗಿದ್ದವು.
ಇದೇ ಪ್ರಮಾಣದ ಭೂಕಂಪ 1976ರ ಜುಲೈ 28ರಂದು ಸಂಭವಿಸಿತ್ತು. ಬೀಜಿಂಗ್ ಬಳಿಯ ತಂಗಶಾನ್ ನಗರದಲ್ಲಿ ಸಂಭವಿಸಿದ್ದ ಈ ಭೂಕಂಪ ಎರಡೂವರೆ ಲಕ್ಷ ಜನರನ್ನು ಆಹುತಿ ತೆಗೆದುಕೊಂಡಿತ್ತು.
(ಏಜೆನ್ಸೀಸ್)












Click it and Unblock the Notifications