2 ನೇ ಪಿಯುಸಿ ಫಲಿತಾಂಶದಲ್ಲಿ ತೀವ್ರ ಕುಸಿತ
ಬೆಂಗಳೂರು, ಮೇ.2: ಎಂದಿನಂತೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ. 41.31 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ತೀವ್ರ ಕುಸಿತ ಉಂಟಾಗಿದ್ದು, ದಕ್ಷಿಣ ಕನ್ನಡ (ಶೇ.76.72) ಹಾಗೂ ಉಡುಪಿ ಜಿಲ್ಲೆಗಳು (ಶೇ.76.2) ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿವೆ. ಶೇ.16.57ರಷ್ಟು ಫಲಿತಾಂಶ ಪಡೆದಿರುವ ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಮೇ 3ರ ಮಧ್ಯಾಹ್ನ 3ಗಂಟೆಗೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 5,72,197 ವಿದ್ಯಾರ್ಥಿಗಳಲ್ಲಿ 2,36,364 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡವಾರು ಫಲಿತಾಂಶ 41.31ರಷ್ಟಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬೆಂಗಳೂರಿನ 16, ಮೈಸೂರಿನ 6, ಬೆಳಗಾವಿಯ 5 ಮತ್ತು ದಾವಣಗೆರೆಯ 4 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ರಾಜ್ಯದ ಒಟ್ಟಾರೆ ಫಲಿತಾಂಶ:
ಪರೀಕ್ಷೆಗೆ ಹಾಜರಾದ ಒಟ್ಟು 3,18,360 ಬಾಲಕರಲ್ಲಿ 1,12,837 ಮಂದಿ ಪಾಸಾಗಿದ್ದಾರೆ.ಹಾಗೆಯೇ 2,53,837 ಬಾಲಕಿಯರಲ್ಲಿ 1,23,491 ಪಾಸಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ.41.28ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಶೇ. 41.04 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದ 26,415 ವಿದ್ಯಾರ್ಥಿಗಳಲ್ಲಿ 6756 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.36.01 ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ. 47.41ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.36.21, ವಾಣಿಜ್ಯ ವಿಭಾಗದಲ್ಲಿ ಶೇ. 54.79 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 41.26ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕೊನೆಯ ದಿನಾಂಕಗಳು:
ಉತ್ತರ ಪತ್ರಿಕೆಯ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 13 ಕೊನೆಯ ದಿನಾಂಕ. ಫೋಟೋ ಪ್ರತಿ ಶುಲ್ಕ ಒಂದು ಉತ್ತರ ಪತ್ರಿಕೆಗೆ 300 ರೂಗಳನ್ನು ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 20. ಮರು ಮೌಲ್ಯ ಮಾಪನಕ್ಕೆ ಶುಲ್ಕ ಒಂದು ಉತ್ತರ ಪತ್ರಿಕೆಗೆ 750 ರೂಗಳನ್ನು ನಿಗದಿ ಪಡಿಸಲಾಗಿದೆ.
ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 20. ಮರು ಎಣಿಕೆಗೆ ಶುಲ್ಕ ಒಂದು ಉತ್ತರ ಪತ್ರಿಕೆಗೆ ರು.200. 2008ರ ಸಪ್ಲಿಮೆಂಟರಿ ಪರೀಕ್ಷೆಯನ್ನು ದಿನಾಂಕ 19-06-2008 ರಿಂದ 28-06-2008ರವರೆಗೆ ನಡೆಸಲಾಗುವುದು. 2008ರ ಜೂನ್ ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಆಯಾ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಲು 17-05-2008 ಕೊನೆಯ ದಿನಾಂಕವಾಗಿರುತ್ತದೆ.
(ದಟ್ಸ್ ಕನ್ನಡ ವಾರ್ತೆ)
Karnataka SSLC Results 2008
Karnataka PUC Results 2008


Click it and Unblock the Notifications
