ಮೊದಲ ಚುಂಬನದಲ್ಲಿ ನಮ್ಮ ಅನಿಲ್ ಕುಂಬ್ಳೆಗೆ ಜೇನುತುಪ್ಪ
ನವದೆಹಲಿ, ನ. 26 : ತಮ್ಮ ನಾಯಕತ್ವದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಭಾರತ ತಂಡಕ್ಕೆ ಜಯತಂದುಕೊಟ್ಟರು. ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಮವಾರ(ನ.26) 6ವಿಕೆಟ್ ಗಳ ಜಯವನ್ನು ಭಾರತ ಸಾಧಿಸಿದೆ. ನಿನ್ನೆ ಭಾನುವಾರವೇ ಆಟ ಮುಗಿಯಬಹುದಾಗಿತ್ತು. ಆದರೆ, ಮಂದ ಬೆಳಕಿನ ಕಾರಣ ಐದನೆ ದಿನಕ್ಕೆ ಆಟ ಮುಂದುವರೆಯಿತು.
ಗೆಲ್ಲಲು ಬೇಕಾಗಿದ್ದ 35ರನ್ನುಗಳನ್ನು ಸಚಿನ್ ತೆಂಡೂಲ್ಕರ್ ಪಟಪಟ ಹೊಡೆದು ಆಟ ಮುಗಿಸಿದರು. ಭಾನುವಾರ ಚೆನ್ನಾಗಿ ಆಡಿ 48ರನ್ ಗಳಿಸಿದ್ದ ಗಂಗೂಲಿ, ಸೋಮವಾರ ಬೆಳಗ್ಗೆ ಬೇಗ ಔಟಾಗಿಬಿಟ್ಟರು. ಸಚಿನ್ (56) ಮತ್ತು ಲಕ್ಷ್ಣಣ್ (6) ಗೆಲುವಿನ ವಿಧಿವಿಧಾನಗಳನ್ನು ಪೂರೈಸಿದರು. ಪಂದ್ಯದ ಪುರುಷೋತ್ತಮ ಗೌರವಕ್ಕೆ ಕುಂಬ್ಳೆ ಪಾತ್ರರಾದರು.
ಮೊದಲ ಇನಿಂಗ್ಸ್ ನಲ್ಲಿ ದ್ರಾವಿಡ್ ಮತ್ತು ಲಕ್ಷಣ್ ಅವರ ಕೆಚ್ಚಿನ ಆಟ ಮತ್ತು ಎರಡನೆ ಇನ್ನಿಂಗ್ಸ್ ನಲ್ಲಿ ಗಂಗೂಲಿ ಹಾಗೂ ಸಚಿನ್ ಕ್ರೀಸಿಗೆ ಕಚ್ಚಿಕೊಂಡು ಆಡಿದ್ದು ಅಂತಿಮವಾಗಿ ಗೆಲುವಿನ ಗುಟ್ಟಾಯಿತು. ಕುಂಬ್ಲೆ ಬ್ಯಾಟಿಂಗ್(24)ನಲ್ಲಿ ಮತ್ತು ಬೌಲಿಂಗ್ನಲ್ಲಿ ಮಿಂಚಿ (7ವಿಕೆಟ್) ಭಾರತದ ಗೆಲುವಿನ ಸೂತ್ರಧಾರರಾದರು. ಪಾಕ್ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಶೊಯೇಬ್ ಅಖ್ತರ್ ಅತ್ಯುತ್ತಮವಾಗಿ, ವೇಗವಾಗಿ, ಕರಾರುವಾಕ್ಕಾಗಿ ಚೆಂಡು ಎಸೆದು ಭಾರತ ದಡಮುಟ್ಟದಂತೆ ತುಂಬ ಶ್ರಮಿಸಿದರು. ಆದರೆ ಕೊನೆಗೆ ನಕ್ಕಿದ್ದು ಭಾರತ.
(ದಟ್ಸ್ ಕ್ರಿಕೆಟ್ ವಾರ್ತೆ)












Click it and Unblock the Notifications