4ಕೈ,4ಕಾಲುಗಳ ಲಕ್ಷ್ಮಿ ಮುಖದಲ್ಲಿ ದೀಪಾವಳಿ ನಗೆ ತರಲಿ
ಬೆಂಗಳೂರು, ನ.07 : ವಿಶ್ವದ ಗಮನ ಬೆಂಗಳೂರಿನತ್ತ ತಿರುಗಿದೆ. ಎಂಟು ಕೈಕಾಲುಗಳ ಬಾಲಕಿ ಲಕ್ಷ್ಮಿ(2) ಶರೀರದ ಅನಗತ್ಯ ಭಾಗಗಳನ್ನು ಬೇರ್ಪಡಿಸುವ ಶಸ್ತ್ರ ಚಿಕಿತ್ಸೆ ಬುಧವಾರ(ನ.07) ಮುಕ್ತಾಯವಾಗಿದೆ. ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ಕೈ ಮತ್ತು ನಾಲ್ಕು ಕಾಲುಗಳ ಈ ಕೂಸು ಬಿಹಾರದಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದೆ. ಸುಮಾರು 40ಗಂಟೆಗಳ ಕಾಲ ವಿವಿಧ ಶಸ್ತ್ರ ಚಿಕಿತ್ಸೆ ನಡೆಸಿ, ಲಕ್ಷ್ಮಿಗೆ ಸಹಜ ಬಾಲಕಿಯ ರೂಪ ನೀಡುವ ಪ್ರಯತ್ನ ನಗರದ ನಾರಾಯಣ ಹೆಲ್ತ್ ಸಿಟಿಯ ಒಂದು ಭಾಗವಾದ ಸ್ಪರ್ಶ್ ಆಸ್ಪತ್ರೆಯಲ್ಲಿ ನಡೆದಿದೆ.
15ಮಂದಿ ನುರಿತ ಶಸ್ತ್ರಚಿಕಿತ್ಸಾ ತಜ್ಞರು ಸೇರಿದಂತೆ 30ವೈದ್ಯರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಶಸ್ತ್ರಚಿಕಿತ್ಸೆಗಳ ಒಟ್ಟು ವೆಚ್ಚ 25ಲಕ್ಷ ರೂಪಾಯಿ. ಬಿಹಾರದ ಕೂಲಿ ಕಾರ್ಮಿಕರ ಮನೆಯಲ್ಲಿ ದೀಪಾವಳಿ ದಿನ ಈ ಮಗು ಜನಿಸಿತ್ತು. ಈ ವರ್ಷದ ದೀಪಾವಳಿ ಲಕ್ಷ್ಮಿ ಕುಟುಂಬಕ್ಕೆ ನೆಮ್ಮದಿಯ ಬೆಳಕು ತರಲಿ ಎಂಬುದು ದಟ್ಸ್ ಕನ್ನಡದ ಹಾರೈಕೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications