ಷೇರು ಪವಾಡ : ಮುಖೇಶ್ ವಿಶ್ವದ ನಂ.1 ಶ್ರೀಮಂತ
ನವದೆಹಲಿ, ಅ.30 : ರಿಲಯನ್ಸ್ ಸಮೂಹದ ಒಡೆಯ ಮುಖೇಶ್ ಅಂಬಾನಿ , ಜಗತ್ತಿನ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಈವರೆಗೂ ಅಗ್ರಸ್ಥಾನದಲ್ಲಿದ್ದ ಸ್ಲಿಮ್ ಹಾಗೂ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಂ.1 ಪಟ್ಟಗಳಿಸಿದ್ದಾರೆ.
ಸೋಮವಾರ(ಅ.29) ಭಾರತೀಯ ಷೇರು ಮಾರುಕಟ್ಟೆಯಲ್ಲಿ, ರಿಲಯನ್ಸ್ ಷೇರುಗಳ ಬೆಲೆ ಮೇಲಕ್ಕೇರುತ್ತಿದ್ದಂತೆ 63.2ಶತಕೋಟಿ ಡಾಲರ್ ಆಸ್ತಿ ಗಳಿಸಿ, ಅಗ್ರಸ್ಥಾನ ಗಳಿಸಿದರು. ಮುಖೇಶ್ ಹಾಗೂ ಅನಿಲ್ ಅಂಬಾನಿಯವರ ಜಂಟಿ ಆಸ್ತಿ ಮೌಲ್ಯ 100ಶತಕೋಟಿ ಡಾಲರ್ ದಾಟಿದ ಹಿನ್ನೆಲೆಯಲ್ಲಿ ಹಣಗಳಿಕೆಯಲ್ಲಿ ವಿಶ್ವದ ನಂ.1 ಶ್ರೀಮಂತ ಕುಟುಂಬವೆನಿಸಿದೆ.
ಗೇಟ್ಸ್ ಮತ್ತು ಸ್ಲಿಮ್ ಗಳಿಕೆ ಇಳಿತ :
ಮೆಕ್ಸಿಕೋ ಉದ್ಯಮಿ ಕಾರ್ಲೋಸ್ ಸ್ಲಿಮ್ (62.3 ಶತಕೋಟಿ ಡಾಲರ್)ಹಾಗೂ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ (62.29ಶತಕೋಟಿ ಡಾಲರ್) ಗಳಿಸಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರು. ಉಳಿದಂತೆ ವಾರೆನ್ ಬಫೆಟ್ (55.9ಶತಕೋಟಿ ಡಾಲರ್) ಹಾಗೂ ಭಾರತ ಮೂಲದ ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ (50.9ಶತಕೋಟಿ ಡಾಲರ್) ಗಳಿಕೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಅಂಬಾನಿ ಕುಟುಂಬ ನಂ.1 :
71ಶತಕೋಟಿ ಡಾಲರ್ ಗಳಿಕೆಯೊಂದಿಗೆವಿಶ್ವದ ಶ್ರೀಮಂತ ಕುಟುಂಬ ಎಂದು ಹೆಸರಾಗಿದ್ದ ಅಮೆರಿಕದ ವಾಲ್ಟನ್ ಕುಟುಂಬ (ವಾಲ್ ಮಾರ್ಟ್ ಕಂಪೆನಿ)ವನ್ನು ಹಿಂದೆ ತಳ್ಳಿ ಅಂಬಾನಿ ಕುಟುಂಬ ಅಗ್ರಸ್ಥಾನಕ್ಕೇರಿದೆ. ಅನಿಲ್ ಅಂಬಾನಿಯವರ 38.5ಶತಕೋಟಿ ಡಾಲರ್ ಹಾಗೂ ಮುಖೇಶ್ ರ 63.2ಶತಕೋಟಿ ಡಾಲರ್ ಸೇರಿಸಿ ಒಟ್ಟು 101.7ಶತಕೋಟಿ ಡಾಲರ್ ನೊಂದಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
(ಏಜನ್ಸೀಸ್)












Click it and Unblock the Notifications