ನಿನ್ನೆ ಯುವಿ ಬ್ಯಾಟಿಂಗ್ ಪುಳಕ : ಇಂದು ರಾತ್ರಿ ಸತ್ವಪರೀಕ್ಷೆ
ಡರ್ಬನ್ , ಸೆಪ್ಟೆಂಬರ್ 20 : ಟ್ವೆಂಟಿ 20 ವಿಶ್ವಕಪ್ ನಲ್ಲಿ ಬುಧವಾರ(ಸೆ.19) ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ವಿಶ್ವ ದಾಖಲೆ ಮೆರೆದು ಭಾರತದ ಗೆಲುವಿಗೆ ಯುವರಾಜ್ ಸಿಂಗ್ ಕಾರಣರಾದರು. ಸತತ ಆರು ಬಾಲುಗಳಲ್ಲಿ ಆರು ಸಿಕ್ಸರ್ ಹೊಡೆದ ಯುವರಾಜ್ ಸಿಂಗ್, ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನ ತಂದಿದ್ದಾರೆ.
ಕಿಂಗ್ಸ್ ಮೀಡ್ ಕ್ರೀಡಾಂಗಣದ ಕಿಂಗ್ ಆದ ಯುವರಾಜ್ ಸಿಂಗ್ ಅವರ ಅಬ್ಬರದ ಬ್ಯಾಟಿಂಗ್ ಫಲವಾಗಿ , ಭಾರತ ಉಪಾಂತ್ಯ ಪಂದ್ಯದ ಆಸೆ ಪಡೆಬಹುದಾಗಿದೆ.
ಗೆಲುವಿನ ಗುರಿಯಾದ 218ರನ್ ಗಳಿಸಲು ಹೆಣಗಿದ ಇಂಗ್ಲೆಂಡ್, ಟೂರ್ನಿಯಿಂದ ಹೊರಬಿದ್ದಿದೆ. ಭಾರತದ ಈ ಗೆಲುವಿಗೆ ಸೆಹ್ವಾಗ್ ರ 68ರನ್, ಗಂಭೀರ್ ಅವರ 58ರನ್ ಹಾಗೂ ಪಠಾಣ್ ಪಡೆದ 3ವಿಕೆಟ್ ಗಳೇ ಕಾರಣ.
ಇಂದಿನ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೆ, ನ್ಯೂಜಿಲ್ಯಾಂಡನ್ನು ಹಿಂದಕ್ಕೆ ತಳ್ಳಿ, ಸೆಮಿ ಫೈನಲ್ ತಲುಪಲಿದೆ. ರನ್ ಸರಾಸರಿ ಹೀಗಿದೆ :
ದಕ್ಷಿಣ ಆಫ್ರಿಕ(+0.766), ಭಾರತ(+0.200), ನ್ಯೂಜಿಲ್ಯಾಂಡ್ (+0.050).
ನ್ಯೂಜಿಲ್ಯಾಂಡ್ ಸೂಪರ್ 8 ಸುತ್ತಿನಲ್ಲಿ 2 ಜಯ ದಾಖಲಿಸಿದೆ. ಭಾರತ 1 ಜಯ ದಾಖಲಿಸಿದ್ದು, ರನ್ ಸರಾಸರಿಯಲ್ಲಿ ಕಿವೀಸ್ ಗಿಂತ ಮುಂದಿದೆ. ದಕ್ಷಿಣ ಆಫ್ರಿಕ ಸರಾಸರಿಯಲ್ಲಿ ಮುಂದಿದ್ದರೂ ಅದಕ್ಕೆ, ಭಾರತದ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ.
ಯುವರಾಜನ ಅಬ್ಬರ : ಇಂಗ್ಲೆಂಡ್ ನ ಯುವ ಬೌಲರ್ ಬ್ರಾಡ್ ಗೆ ದುಃಸ್ವಪ್ನವಾಗಿ ಕಾಡಿದ ಯುವರಾಜ್ 58ರನ್(16 ಎಸೆತಗಳಲ್ಲಿ 7ಸಿಕ್ಸರ್ , 3 ಬೌಂದರಿ) ಪಡೆದು ಹಲವು ದಾಖಲೆ ಮೆರೆದರು.
- 12ಎಸೆತಗಳಲ್ಲಿ ಅರ್ಧಶತಕ(ಟ್ವೆಂಟಿ20 ,ಏಕದಿನ ಪಂದ್ಯಗಳ ಇತಿಹಾಸದಲ್ಲಿ ವೇಗದ ಅರ್ಧ ಶತಕ)
- 6ಎಸೆತಗಳಲ್ಲಿ 6ಸಿಕ್ಸರ್(ಟ್ವೆಂಟಿ20 ಪಂದ್ಯದ ದಾಖಲೆ; ಈ ಮುಂಚೆ ಪ್ರಥಮದರ್ಜೆ ಪಂದ್ಯದಲ್ಲಿ ರವಿಶಾಸ್ತ್ರಿ, ಹಾಲೆಂಡ್ ವಿರುದ್ಧ ಗಿಬ್ಸ್ ಈ ಸಾಧನೆಗೈದಿದ್ದಾರೆ)
(ದಟ್ಸ್ ಕ್ರಿಕೆಟ್ ವಾರ್ತೆ)












Click it and Unblock the Notifications