ಅಟ್ಲಾಂಟದಲ್ಲಿನ ನಗರಕ್ಕೆ ಭಾರತದ ನಗರಗಳ ಜೋಡಿ!!
ಅಟ್ಲಾಂಟ : ಭಾರತದಲ್ಲಿನ ನಗರಗಳ ಜತೆ ನಿಕಟ ಸಂಬಂಧ- ಸಂಪರ್ಕ ಹೊಂದಲು ಅಮೆರಿಕದ ನಗರಗಳು ಸಿದ್ಧವಾಗಿದೆ. ಅಟ್ಲಾಂಟದ ಜತೆ ಭಾರತದ ಯಾವ ನಗರ ಜೋಡಿಯಾಗಲಿದೆ ಎಂಬುದನ್ನು ಮೇ 30 ರಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.
ಬೆಂಗಳೂರು-ಸ್ಯಾನ್‌ಫ್ರಾನ್ಸಿಕೋ ಜೋಡಿ :ಭಾರತದ ಐಟಿ ಸಿಟಿ ಬೆಂಗಳೂರು ನಗರ ಹಾಗೂ ಅಮೆರಿಕದ ಪಶ್ಚಿಮ ತೀರದ ನಗರ ಸ್ಯಾನ್ ಫ್ರಾನ್ಸಿಸ್ಕೋಗಳನ್ನು ಅವಳಿ ಸೋದರಿ ನಗರಗಳೆಂದು ಕಳೆದ ವಾರ ಘೋಷಿಸಲಾಗಿದೆ. ಈ ವಿಷಯವನ್ನು ಬೆಂಗಳೂರು ವಾಣಿಜ್ಯ ಹಾಗೂ ಕೈಗಾರಿಕ ಚೆಂಬರ್‌ನ ಅಧ್ಯಕ್ಷ ವೆಂಕಟ್ ಕೆದ್ಲಾಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದ ಟ್ರಾಫಿಕ್ ಕಾರ್ಯನಿರ್ವಹಣೆ, ಮೂಲಭೂತ ಸೌಕರ್ಯ, ಪರಿಸರ ಸಂರಕ್ಷಣೆ, ವಾಣಿಜ್ಯ, ಐಟಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ವೆಂಕಟ್ ಹೇಳಿದ್ದಾರೆ.
ಭಾರತದ ನಗರಗಳ ಜತೆ ಉತ್ತಮ ಸಂಬಂಧ ಬೆಸೆದು, ಎಲ್ಲಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಿ ,ವಿಶ್ವ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕದ ನಗರಗಳ ಜತೆಗಿನ ಈ ಜೋಡಿ ಯೋಜನೆ ಚಾಲನೆಯಲ್ಲಿದೆ. ಭಾರತದ ಯಾವುದೇ ನಗರ ಅಮೆರಿಕದ ನಗರಗಳ ಜತೆ ಸಂಬಂಧ ಹೊಂದಲು ಬಯಸಿದರೆ ಲಿಖಿತ ಪತ್ರದ ಮೂಲಕ ನಾಮಾಂಕಿತ ಮಾಡಬಹುದು. ಭಾರತದಲ್ಲಿನ ನಗರಗಳ ಮೇಯರ್ ಅಥವಾ ಮುನ್ಸಿಪಾಲಿಟಿ ಅಧ್ಯಕ್ಷರು ಕಳಿಸಿದ ಪತ್ರವನ್ನು ಮಾತ್ರ ಪುರಸ್ಕರಿಸಲಾಗುತ್ತದೆ.
ಈಗಾಗಲೇ ಅಟ್ಲಾಂಟ ಪ್ರಾಂತ್ಯದ ನಗರಗಳ ಜತೆ ಕೈ ಜೋಡಿಸಿ ನಿಕಟ ಸಂಪರ್ಕಹೊಂದಿರುವ ನಗರಗಳೆಂದು ಗುರುತಿಸಲ್ಪಟ್ಟಿರುವ ಭಾರತದ ನಗರಗಳು ಈ ಬಾರಿಯ ಆಯ್ಕೆ ಪಟ್ಟಿಯಲ್ಲಿ ಸೇರಿಸುವಂತಿಲ್ಲ.
ಚಾಲ್ತಿಯಲ್ಲಿರುವ ಜೋಡಿ ನಗರಗಳು ಇಲ್ಲಿದೆ:
ಬೆಂಗಳೂರು (ಕ್ಲಿವ್‌ಲ್ಯಾಂಡ್, ಓಹಾಯೋ), ಕೋಲ್ಕತ್ತಾ(ಲಾಂಗ್ ಬೀಚ್, ಕ್ಯಾಲಿಫೋರ್ನಿಯಾ), ಚೆನ್ನೈ(ಡೆನ್‌ವರ್, ಕೊಲರಾಡೊ), ದೆಹಲಿ(ಚಿಕಾಗೋ, ಇಲಿನಾಯ್), ಹೈದರಾಬಾದ್(ರಿವರ್‌ಸೈಡ್, ಕ್ಯಾಲಿಫೋರ್ನಿಯಾ), ಜೈಪುರ, ರಾಜಸ್ಥಾನ(ಫ್ರಿಮಾಂಟ್, ಕ್ಯಾಲಿಫೋರ್ನಿಯಾ) ಮಣಿಪಾಲ್, ಕರ್ನಾಟಕ(ಲೋಮಾ ಲಿಂಡಾ, ಕ್ಯಾಲಿಫೋರ್ನಿಯಾ), ಮುಂಬೈ(ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ) ಪೂನಾ(ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯಾ) ಶಿಮ್ಲಾ, ಹಿಮಾಚಲಪ್ರದೇಶ(ಕಾರ್ಬೊಂಡೆಲ್, ಇಲಿನಾಯ್), ತಿರುವನಂತಪುರ, ಕೇರಳ(ಗಾಲ್ವೆಸ್ಟನ್, ಟೆಕ್ಸಾಸ್) ಹಾಗೂ ವಿಜಯವಾಡ ,ಆಂಧ್ರಪ್ರದೇಶ(ಮೊಡೆಸ್ಟೊ, ಕ್ಯಾಲಿಫೋರ್ನಿಯಾ).
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications