ಸಿಓಡಿ ದಾಳಿ : ಆನೇಕಲ್ ಬಳಿ 19 ಕಿಲೋ ಗಾಂಜಾ ವಶ
ಬೆಂಗಳೂರು : ಸಿಓಡಿ ಪೊಲೀಸರು ದಾಳಿ ನಡೆಸಿ, ಕಾನೂನು ಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 19 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಆನೇಕಲ್ ಬಳಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ, ನುಸೇನೂರು ಗ್ರಾಮದ ರೇವಮ್ಮ ಅಲಿಯಾಸ್ ಅಮ್ಮಣ್ಣಿ(52) ಎಂಬ ಮಹಿಳೆಯ ದನದ ಕೊಟ್ಟಿಗೆ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ ವಶಪಡಿಸಿಕೊಂಡ 75,000ರೂಪಾಯಿ ಮೌಲ್ಯದ ಗಾಂಜಾ, ತಮಿಳುನಾಡಿನಿಂದ ಕಳ್ಳಸಾಗಣೆಯಾಗಿತ್ತು ಎನ್ನಲಾಗಿದೆ.
ರೇವಮ್ಮ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಪ್ಯಾಕ್ ಮಾಡಿ, ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಮಾರಾಟ ಮಾಡುತ್ತಿದ್ದಳು. 100 ಗ್ರಾಂ ಪೊಟ್ಟಣವನ್ನು 400ರೂಪಾಯಿಗೆ, ಒಂದು ಕಿಲೋ ಗ್ರಾಂ ಪೊಟ್ಟಣವನ್ನು 4,000ರೂಪಾಯಿಗೆ ಮಾರಾಟ ಮಾಡುತ್ತಿದ್ದಳು ಎಂದು ಮೂಲಗಳು ಹೇಳಿವೆ.
ರೇವಮ್ಮನನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ಮುಂದುವರಿದಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications