ಮೇ ತಿಂಗಳಲ್ಲಿ ಪುರಸಭೆ, ನಗರಸಭೆ, ಪಾಲಿಕೆ ಚುನಾವಣೆ
ಗುಲ್ಬರ್ಗಾ : ಆರು ನಗರಪಾಲಿಕೆಗಳೂ ಸೇರಿದಂತೆ ರಾಜ್ಯದ 206 ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಎಂ.ಆರ್.ಹೆಗಡೆ, ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯಾ ಜಿಲ್ಲಾಡಳಿತಗಳು ನಡೆಸುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಪ್ರವಾಸ ಕೈಗೊಂಡಿದ್ದಾರೆ.
ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಉನ್ನತಮಟ್ಟದ ಸಭೆ ನಡೆಯಲಿದೆ. ಆನಂತರ ಚುನಾವಣಾ ಕಾರ್ಯಕ್ರಮ ಪಟ್ಟಿ ಪ್ರಕಟಿಸಲಾಗುವುದು ಎಂದು ಹೆಗಡೆ, ಸುದ್ದಿಗಾರರಿಗೆ ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 214 ಸ್ಥಳೀಯ ಸಂಸ್ಥೆಗಳಿವೆ. ಸದ್ಯಕ್ಕೆ 206ಕ್ಕೆ ಚುನಾವಣೆಗಳು ನಡೆಯಲಿವೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಕುರಿತ ವಿವಾದ ಹೈಕೋರ್ಟ್‌ನಲ್ಲಿದೆ. ವಿವಾದ ಬಗೆಹರಿದ ನಂತರ ಚುನಾವಣೆ ನಡೆಯಲಿದೆ. ಮಂಗಳೂರು ನಗರಪಾಲಿಕೆ ಚುನಾವಣೆ ಜೂನ್ 16ರ ನಂತರ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications