ಆ ಸಾಧುವೇ ಸುಭಾಷ್ ಚಂದ್ರ ಬೋಸ್ ಇರಬಹುದಾ?
ಗುನಾ (ಮಧ್ಯಪ್ರದೇಶ) : ಅಂದಾಜು 125 ವರ್ಷ ವಯಸ್ಸಿನ ಸಾಧು ಬಾಬಾ ಲಾಲ್‌ಜಿ ಮಹಾರಾಜ್ ಎನ್ನುವ ವ್ಯಕ್ತಿ ತಮ್ಮ ಜೀವಿತದ ಕೊನೆಯ ಘಳಿಗೆಯಲ್ಲಿ ತಾವೇ ಸುಭಾಷ್‌ಚಂದ್ರ ಬೋಸ್ ಎಂದು ಹೇಳಿಕೊಂಡು ನಿಧನರಾಗಿದ್ದಾರಂತೆ. ಕಳೆದ ಎರಡು ದಿನಗಳಿಂದ ಈ ಬಗ್ಗೆಯೇ ಎಲ್ಲೆಡೆ ಮಾತು.
ಮೊನ್ನೆ ಅ.27ರಂದು ಬಾಬಾ ಲಾಲ್‌ಜಿ ಇಲ್ಲಿ ಕೊನೆಯುಸಿರೆಳೆದರು ಎಂದು ಗ್ರಾಮದ ಸರಪಂಚ್ ಗಜೇಂದ್ರ ಸಿಂಗ್ ಹೇಳಿದ್ದಾರೆ. ‘ಸುಭಾಷ್ ಚಂದ್ರ ಬೋಸ್‌ರು ಮರಣ ಹೊಂದಿರುವ ಘಟನೆಯನ್ನು ಬಾಬಾ ಲಾಲ್‌ಜಿ ಮಹಾರಾಜ್ ಮುಂಚಿನಿಂದಲೂ ಅಲ್ಲಗಳೆಯುತ್ತಿದ್ದರು. ಅವರಿಗೆ ತಲೆ ಮತ್ತು ದೇಹದಲ್ಲಿ ಆಳವಾದ ಗಾಯದ ಕುರುಹುಗಳಿದ್ದವು. ವಿಮಾನ ಅಪಘಾತವೊಂದರಲ್ಲಿ ಈ ಗಾಯಗಳಾಗಿದ್ದವು ಎಂದು ಬಾಬಾ ಆಗಾಗ ಹೇಳುತ್ತಿದ್ದರು’ ಎಂದು ಆ ಹಳ್ಳಿಯ ಜನತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಮನೋಜ್ ಕೆ. ಮುಖರ್ಜಿ ಬೋಸರು 1948ರ ಅಗಸ್ಟ್ 18 ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಮರಣ ಹೊಂದಿಲ್ಲ ಎಂದು ಇತ್ತೀಚೆಗಷ್ಟೇ ವರದಿ ಸಲ್ಲಿಸಿರುವುದರಿಂದ ಈ ಬಾಬಾ ಲಾಲ್‌ಜಿ ಸಾವಿನ ಪ್ರಕರಣ ಕುತೂಹಲ ಕೆರಳಿಸಿದೆ. ಗುನಾದಲ್ಲಿ ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ತನಿಖೆಗೆ ಅಗತ್ಯವಾದಲ್ಲಿ ಬಾಬಾ ಅವರ ಪಾರ್ಥಿವ ಶರೀರವನ್ನು ಸಮಾಧಿಯಿಂದ ಹೊರತೆಗೆಯಲಾಗುವುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
(ಏಜನ್ಸೀಸ್)











Click it and Unblock the Notifications