ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಸಂದ್ರದ ಸರ್ಕಾರಿ ಶಾಲೆಯಲ್ಲಿ ಕಲಾಂ ಮೇಷ್ಟ್ರು ಪಾಠ ಮಾಡಿದ್ರು

By Staff
|
Google Oneindia Kannada News

ನಾಗಸಂದ್ರದ ಸರ್ಕಾರಿ ಶಾಲೆಯಲ್ಲಿ ಕಲಾಂ ಮೇಷ್ಟ್ರು ಪಾಠ ಮಾಡಿದ್ರು
ದೇಶದ ಪ್ರಥಮ ಪ್ರಜೆ ಆಗಮನದಿಂದ ಪುಳಕಗೊಂಡ ನಾಗಸಂದ್ರ ಜನತೆ

  • ದಟ್ಸ್‌ಕನ್ನಡ ಬ್ಯೂರೊ
ಬೆಂಗಳೂರು : ನಗರದ ದಾಸರಹಳ್ಳಿ ನಗರಸಭೆ ವ್ಯಾಪ್ತಿಯ ನಾಗಸಂದ್ರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪಾಲಿಗೆ ಜುಲೈ 22ರ ಶುಕ್ರವಾರ ಅವಿಸ್ಮರಣೀಯ ದಿನ. ಮಕ್ಕಳಿಗಷ್ಟೇ ಅಲ್ಲ , ನಾಗಸಂದ್ರದ ಜನತೆಯ ಪಾಲಿಗೂ ಅದು ಶುಭ ಶುಕ್ರವಾರ ! ಹಬ್ಬ ಅನ್ನಿ , ಹೇಗಿದ್ದರೂ ಇದು ಶ್ರಾವಣ.

ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಶುಕ್ರವಾರ ನಾಗರಸಂದ್ರದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಚಿಣ್ಣರೊಂದಿಗೆ ಬೆರೆಯುವುದು, ಮಾತನಾಡುವುದು, ಮಾತನಾಡಿಸುವುದು, ಭಾಷಣ ಮಾಡುವುದು, ಪ್ರಶ್ನೆಗಳನ್ನು ಕೇಳುವುದು ಕಲಾಂರಿಗೆ ಬಹುಪ್ರಿಯ. ಇವೆಲ್ಲವೂ ನಾಗಸಂದ್ರ ಶಾಲೆಯಲ್ಲೂ ಜರುಗಿತು.

ಕನಸು ಕನಸು ಮತ್ತು ಕನಸು. ಕನಸು ಕಾಣುವುದನ್ನು ಕಲಿಯಿರಿ. ಕನಸುಗಳನ್ನು ಆಲೋಚನೆಗಳನ್ನಾಗಿ ಬದಲಿಸಿ. ಆಲೋಚನೆಗಳನ್ನು ಕ್ರಿಯೆಗೆ ತನ್ನಿ - ಈ ಮಾತುಗಳನ್ನು ಕಲಾಂ ನಾಗಸಂದ್ರ ಶಾಲೆಯಲ್ಲೂ ಪುನರುಚ್ಛರಿಸಿದರು. ಈ ಅಜ್ಜನೇನಾ ದೇಶದ ಕ್ಷಿಪಣಿ ತಂತ್ರಜ್ಞಾನದ ರೂಪಕ, ನಿರ್ಮಾಪಕ- ಚಿಣ್ಣರಿಗೆಲ್ಲ ಬೆರಗು.

ನಿಮ್ಮಲ್ಲಿ ರಾಜಕೀಯ ನಾಯಕರಾಗಲು ಯಾರು ಬಯಸುತ್ತೀರಿ ?

ಕಲಾಂ ಸಾಹೇಬರು ಪ್ರಶ್ನಿಸಿದಾಗ ಯಾವೊಂದು ಮಗುವೂ ಕೈ ಎತ್ತಲಿಲ್ಲ . ಹೂಂ ಅನ್ನಲಿಲ್ಲ . ಕಲಾಂ ನಕ್ಕರು. ಮಾತು ರಾಜಕಾರಣದಿಂದ ವಿಜ್ಞಾನದತ್ತ ಹೊರಳಿತು. ವಿಜ್ಞಾನದ ಪ್ರಾಥಮಿಕ ಸೂತ್ರಗಳನ್ನು ಕಲಾಂ ಮೇಷ್ಟ್ರು ಮಕ್ಕಳಿಗೆ ಹೇಳಿಕೊಟ್ಟರು. ಪ್ರಶ್ನೆ ಕೇಳಿದರು. ಮಕ್ಕಳು ಕೇಳಿದ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದರು. ಸರ್ಕಾರಿ ಮೇಷ್ಟ್ರು ಹಾಗೂ ಮೇಡಂಗಳು ನಿಂತು ನೋಡುತ್ತಿದ್ದರು !

ಅಂತಿಮವಾಗಿ ಕಲಾಂ ಸಾಹೇಬರು ಹೇಳಿದ್ದು - ಕಲಿಕೆ ಕ್ರಿಯಾಶೀಲತೆಯನ್ನು ಸೃಜನಶೀಲತೆಯನ್ನು ತರುತ್ತದೆ. ಯೋಚನೆ ಜ್ಞಾನವನ್ನು ವೃದ್ಧಿಸುತ್ತದೆ. ಜ್ಞಾನ ನಿಮ್ಮನ್ನು ಅತ್ಯುತ್ತಮರನ್ನಾಗಿಸುತ್ತದೆ.

ಅಂದಹಾಗೆ, 600 ಮಕ್ಕಳು, (ಕಡು ಬಡವರ ಮಕ್ಕಳೇ ಹೆಚ್ಚು ) ಕಲಿಯುತ್ತಿರುವ ನಾಗಸಂದ್ರದ ಈ ಸರ್ಕಾರಿ ಶಾಲೆ ಕಂಪ್ಯೂಟರ್‌ ಕೇಂದ್ರವನ್ನೂ ಹೊಂದಿದೆ. ಎಲ್ಲವೂ, ವಿಪ್ರೋತ್ತಮ ಅಜೀಂ ಪ್ರೇಂಜಿ ಪ್ರತಿಷ್ಠಾನದ ಕೊಡುಗೆ !

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X