Bengaluru: ಸಿಲ್ಕ್ ಬೋರ್ಡ್- ಕೆ. ಆರ್ ಪುರಂ ORR ವೈಟ್ ಟಾಪಿಂಗ್ ಆರಂಭ, ಸವಾರರಿಗೆ ಟ್ರಾಫಿಕ್ ಬಿಸಿ, ಪರ್ಯಾಯ ಮಾರ್ಗಗಳು ಇಲ್ಲಿವೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಐಟಿ ಕಾರಿಡಾರ್ ಎಂದೇ ಕರೆಯಲ್ಪಡುವ ಹೊರವರ್ತುಲ ರಸ್ತೆಗೆ (ORR) ಶೀಘ್ರದಲ್ಲೇ ಕಾಂಕ್ರೀಟ್ ಕಾಮಗಾರಿಗೆ ಪ್ರಾರಂಭವಾಗಲಿದೆ. ವರದಿಗಳ ಪ್ರಕಾರ, ಪ್ರಸ್ತುತ ಇರುವ ಡಾಂಬರು ರಸ್ತೆಯನ್ನು ಕಿತ್ತುಹಾಕಿ, ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗೆ ಬರೋಬ್ಬರಿ 17.1 ಕಿಲೋಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಲಾಗಿದೆ. ಆದರೆ, ಈ ಅಭಿವೃದ್ಧಿ ಕಾಮಗಾರಿಯು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರಿಗೆ ಮುಂದಿನ ದಿನಗಳಲ್ಲಿ ಭಾರಿ ಟ್ರಾಫಿಕ್ ಬಿಸಿ ಮುಟ್ಟಿಸಲಿದೆ.
ಪ್ರಮುಖ ಟ್ರಾಫಿಕ್ ಹಾಟ್‌ಸ್ಪಾಟ್‌ಗಳು
ಕಾಮಗಾರಿ ಆರಂಭವಾದರೆ ಸಿಲ್ಕ್ ಬೋರ್ಡ್ ಜಂಕ್ಷನ್, ಎಚ್‌ಎಸ್‌ಆರ್ ಲೇಔಟ್ ಜಂಕ್ಷನ್, ಅಗರ ಜಂಕ್ಷನ್, ಇಬ್ಲೂರು ಜಂಕ್ಷನ್, ಮಾರತ್ತಹಳ್ಳಿ ಜಂಕ್ಷನ್ ಹಾಗೂ ಕೆ.ಆರ್. ಪುರಂ ಮಾರ್ಗಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುವ ಆತಂಕವಿದೆ.

ಕಚೇರಿ ಸಮಯದಂತಹ ಪೀಕ್ ಅವರ್‌ನಲ್ಲಿ ಈ ಮಾರ್ಗಗಳು ಈಗಾಗಲೇ ನಗರದ ಅತಿದೊಡ್ಡ ಟ್ರಾಫಿಕ್ ಎನ್ನುವ ಕುಖ್ಯಾತಿಗೆ ಪಾತ್ರವಾಗಿವೆ. ಇದೀಗ ರಸ್ತೆ ಅಗೆಯುವುದು, ಲೇನ್ ನಿರ್ಬಂಧಗಳು ಮತ್ತು ವಾಹನಗಳ ಮಾರ್ಗ ಬದಲಾವಣೆಯಿಂದಾಗಿ ಸಂಚಾರ ಇನ್ನಷ್ಟು ನಿಧಾನವಾಗಲಿದೆ.
ಸಂಚಾರ ತಜ್ಞರ ಪ್ರಕಾರ, ಐಟಿ ಪಾರ್ಕ್‌ಗಳ ದಟ್ಟಣೆ, ವಿಮಾನ ನಿಲ್ದಾಣದ ಟ್ರಾಫಿಕ್ ಮತ್ತು ಪ್ರಸ್ತುತ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಸಿಲ್ಕ್ ಬೋರ್ಡ್-ಮಾರತ್ತಹಳ್ಳಿ ಮಾರ್ಗವು ಅತಿ ಹೆಚ್ಚು ಒತ್ತಡವನ್ನು ಎದುರಿಸಲಿದೆ.
ಪ್ರಯಾಣಿಕರ ಸಮಯ ಎಷ್ಟು ವ್ಯರ್ಥವಾಗಲಿದೆ?
ಸಂಚಾರ ವಿಳಂಬದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಅಂದಾಜು ಇಲ್ಲದಿದ್ದರೂ, ಕಚೇರಿ ಸಮಯದಲ್ಲಿ ವಾಹನ ಸವಾರರು ಭಾರಿ ವಿಳಂಬವನ್ನು ಎದುರಿಸಲು ಸಿದ್ಧರಾಗಬೇಕಿದೆ. ಪ್ರಸ್ತುತ 45 ನಿಮಿಷ ತೆಗೆದುಕೊಳ್ಳುವ ಪ್ರಯಾಣವು 90 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅದೇ ರೀತಿ 1 ಗಂಟೆಯ ಪ್ರಯಾಣವು ಟ್ರಾಫಿಕ್ ದಟ್ಟಣೆಯಲ್ಲಿ 2 ಗಂಟೆಗಳ ಗಡಿ ದಾಟುವ ಸಾಧ್ಯತೆಯಿದೆ. ವಿಶೇಷವಾಗಿ ಮುಂಜಾನೆ ಕಚೇರಿಗೆ ಹೋಗುವಾಗ ಮತ್ತು ಸಂಜೆ ಹಿಂದಿರುಗುವ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿರಲಿದೆ. ರಸ್ತೆಯ ಪ್ರಮುಖ ಭಾಗದ ಕಾಂಕ್ರೀಟೀಕರಣ ಕಾಮಗಾರಿ ಶುರುವಾದರಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಪರ್ಯಾಯ ಮಾರ್ಗಗಳೇನು?
ಸಂಚಾರ ಪೊಲೀಸರು ಇನ್ನೂ ಅಂತಿಮ ಮಾರ್ಗ ಬದಲಾವಣೆಯ ನಕ್ಷೆಯನ್ನು ಬಿಡುಗಡೆ ಮಾಡಿಲ್ಲ. ಆದರೂ, ಕಾಮಗಾರಿ ವೇಳೆ ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು ಪ್ರಯಾಣಿಕರು ಪರ್ಯಾಯವಾಗಿ ಸರ್ಜಾಪುರ ರಸ್ತೆ, ಇಂಟರ್ಮೀಡಿಯಟ್ ರಿಂಗ್ ರೋಡ್ (IRR), ಹೊಸೂರು ರಸ್ತೆ ಕಾರಿಡಾರ್, ಒಳ ಬೆಂಗಳೂರಿನ ಸಂಪರ್ಕ ರಸ್ತೆಗಳು ಹಾಗೂ ಮೆಟ್ರೋ ಮತ್ತು ಫೀಡರ್ ಬಸ್ ಸೇವೆಗಳನ್ನು ಅವಲಂಬಿಸಬಹುದಾಗಿದೆ. ಆದರೆ, ಒಆರ್‌ಆರ್‌ನಿಂದ ವಾಹನಗಳು ಈ ಪರ್ಯಾಯ ರಸ್ತೆಗಳಿಗೆ ಬಂದರೆ, ಈಗಾಗಲೇ ಟ್ರಾಫಿಕ್‌ನಿಂದ ತುಂಬಿರುವ ಆ ರಸ್ತೆಗಳಲ್ಲೂ ಭಾರೀ ಟ್ರಾಫಿಕ್ ಆಗುವ ಆತಂಕವಿದೆ.
ಸದ್ಯಕ್ಕೆ ಸಂಚಾರ ಬದಲಾವಣೆ ಯೋಜನೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿ ಶುರುವಾಗುವ ಮುನ್ನ ವಾಹನ ಸವಾರರು ತಮ್ಮ ದೈನಂದಿನ ಪ್ರಯಾಣವನ್ನು ಸೂಕ್ತವಾಗಿ ಯೋಜಿಸಿಕೊಳ್ಳುವುದು ಒಳಿತು.












Click it and Unblock the Notifications