ACB Raid: ಜಲಮಂಡಳಿ ಅಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಹಣ, ಭಾರೀ ಪ್ರಮಾಣದ ಆಭರಣ ಕಂಡು ಎಸಿಬಿ ಅಧಿಕಾರಿಗಳೇ ದಿಗ್ಭ್ರಮೆ
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳು ಹೈದರಾಬಾದ್ ಮಹಾನಗರ ಜಲಮಂಡಳಿ ಮತ್ತು ಒಳಚರಂಡಿ ಮಂಡಳಿಯ (HMWSSB) ಅಧಿಕಾರಿಯೊಬ್ಬರ ನಿವಾಸದ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿದ್ದಾರೆ. ಜಲಮಂಡಳಿಯ ರೆಡ್ ಹಿಲ್ಸ್ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಅವರ ಸಿಕಂದರಾಬಾದ್‌ನಲ್ಲಿರುವ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಅಪಾರ ಪ್ರಮಾಣದ ನಗದು, ಚಿನ್ನ ಪತ್ತೆ
ಅಧಿಕಾರಿಗಳು ನಡೆಸಿದ ಸುದೀರ್ಘ ಶೋಧ ಕಾರ್ಯದ ವೇಳೆ ಕುಮಾರ್ ಅವರ ಮನೆಯಲ್ಲಿ ಅಕ್ರಮವಾಗಿ ಇಡಲಾಗಿದ್ದ ₹1.05 ಕೋಟಿ ನಗದು ಹಣ, ಭಾರೀ ಪ್ರಮಾಣದ ಚಿನ್ನದ ಆಭರಣಗಳು ಹಾಗೂ ಹಲವು ಪ್ರಮುಖ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಪ್ರಾಥಮಿಕ ತನಿಖೆ ಹಾಗೂ ಮನೆ ಶೋಧ ಮುಗಿದಿದ್ದು, ಈ ಭ್ರಷ್ಟಾಚಾರದ ಜಾಲಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿಗೆ ಸೇರಿದ ಹಲವು ಬ್ಯಾಂಕ್ ಲಾಕರ್‌ಗಳನ್ನು ಅಧಿಕಾರಿಗಳು ಇನ್ನೂ ತೆರೆಯಬೇಕಿದೆ. ಆ ಲಾಕರ್‌ಗಳನ್ನು ಓಪನ್ ಮಾಡಿದ ಬಳಿಕ ಮತ್ತಷ್ಟು ಅಕ್ರಮ ಸಂಪತ್ತು ಮತ್ತು ದಾಖಲೆಗಳು ಹೊರಬರುವ ಸಾಧ್ಯತೆ ಇದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕುಮಾರ್ ಅವರ ಸಿಕಂದರಾಬಾದ್‌ನ ಮಲ್ಲಾಪುರದಲ್ಲಿರುವ ವೆಂಕಟರಮಣ ಕಾಲೋನಿ ನಿವಾಸಕ್ಕೆ ಎಸಿಬಿ ಅಧಿಕಾರಿಗಳು ಲಗ್ಗೆ ಇಟ್ಟಾಗ, ಮನೆಯೊಳಗೆ ರಾಶಿ ರಾಶಿ ಬಿದ್ದಿದ್ದ ನಗದು ಹಣವನ್ನು ಕಂಡು ಅಧಿಕಾರಿಗಳೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಮನೆಯಲ್ಲಿ ಎಲ್ಲೆಂದರಲ್ಲಿ ನಗದು ಹಣವನ್ನು ಇಡಲಾಗಿತ್ತು. ಕೇವಲ ಅವರ ನಿವಾಸವೊಂದರಲ್ಲೇ ಬರೋಬ್ಬರಿ ₹1.05 ಕೋಟಿ ನಗದು ಹಣ ಪತ್ತೆಯಾಗಿದೆ. ಕೈಯಿಂದ ಹಣ ಎಣಿಸುವುದು ಅಸಾಧ್ಯವಾದಾಗ, ಅಧಿಕಾರಿಗಳು ನಗದು ಎಣಿಕೆ ಯಂತ್ರಗಳನ್ನು ತರಿಸಿ ನೋಟುಗಳ ಮೌಲ್ಯವನ್ನು ಖಚಿತಪಡಿಸಿಕೊಂಡಿದ್ದಾರೆ.
₹100 ಕೋಟಿಗೂ ಅಧಿಕ ಅಕ್ರಮ ಆಸ್ತಿ ಶಂಕೆ
ಸಾಮಾನ್ಯ ಮಧ್ಯಮ ವರ್ಗದ ಜನ ತುರ್ತು ಪರಿಸ್ಥಿತಿ ಅಥವಾ ಗೃಹಬಳಕೆಯ ಅಗತ್ಯಗಳಿಲ್ಲದೆ ಮನೆಯಲ್ಲಿ ಒಂದು ಲಕ್ಷ ರೂಪಾಯಿ ಇಡಲು ಯೋಚಿಸುವ ಈ ದಿನಗಳಲ್ಲಿ, ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಕೋಟಿಗೂ ಅಧಿಕ ನಗದು ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕುಮಾರ್ ಅವರ ನಿವಾಸ ಮಾತ್ರವಲ್ಲದೆ, ಅವರ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು ಎಂಟು ವಿಭಿನ್ನ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಒಟ್ಟು ಅಕ್ರಮ ಸಂಪತ್ತಿನ ಮೌಲ್ಯ ₹100 ಕೋಟಿಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.
ಜನಸಾಮಾನ್ಯರಿಗೆ ಕುಡಿಯುವ ನೀರು ಪೂರೈಕೆ, ಒಳಚರಂಡಿ ನಿರ್ವಹಣೆ ಮತ್ತು ಎಸ್‌ಟಿಪಿ (STP) ಘಟಕಗಳ ಉಸ್ತುವಾರಿ ನೋಡಿಕೊಳ್ಳಬೇಕಾದ ಹೈದರಾಬಾದ್ ಜಲಮಂಡಳಿಯ ಉನ್ನತ ಹುದ್ದೆಯಲ್ಲಿದ್ದ ಕುಮಾರ್, ಹೊಸ ವಾಟರ್ ಕನೆಕ್ಷನ್ ನೀಡುವುದು ಮತ್ತು ನೀರಿನ ಟ್ಯಾಂಕರ್‌ಗಳ ವಿತರಣೆಯನ್ನು ನಿರ್ಧರಿಸುವ ಪ್ರಮುಖ ಅಧಿಕಾರ ಹೊಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಲಂಚದ ರೂಪದಲ್ಲಿ ದೋಚಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಆರೋಪಿಯ ಬ್ಯಾಂಕ್ ಲಾಕರ್‌ಗಳನ್ನು ಅಧಿಕಾರಿಗಳು ಇನ್ನು ಕೆಲವೇ ದಿನಗಳಲ್ಲಿ ತೆರೆಯಲಿದ್ದು, ಅಲ್ಲಿ ಮತ್ತಷ್ಟು ಬೆಳ್ಳಿ, ಬಂಗಾರ ಹಾಗೂ ಅಕ್ರಮ ಆಸ್ತಿಯ ಕರಾಳ ಮುಖ ಅನಾವರಣಗೊಳ್ಳುವ ಸಾಧ್ಯತೆ ಇದೆ. ಎಸಿಬಿ ಅಧಿಕಾರಿಗಳ ತನಿಖೆ ಮುಂದುವರಿದಿದೆ.













Click it and Unblock the Notifications