Darshan: ಈಡೇರಿತು ನಟ ದರ್ಶನ್ ಆಸೆ: ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಜೈಲಿನಲ್ಲಿ ಪತ್ನಿ, ಮಗನ ಮುಖಾಮುಖಿ ಭೇಟಿ; ಮಾತುಕತೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಇಂದು ವಿಶೇಷ ದಿನ. ಮೇ 19ರ ಇಂದು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಯ 23ನೇ ವಿವಾಹ ವಾರ್ಷಿಕೋತ್ಸವವಾಗಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಕಠಿಣ ಕಾನೂನು ಹೋರಾಟ ಮತ್ತು ಸವಾಲುಗಳ ನಡುವೆಯೂ ಈ ದಂಪತಿ ಜೈಲಿನಲ್ಲೇ ಭೇಟಿಯಾಗುವ ಮೂಲಕ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಕಳೆದಿದ್ದಾರೆ.
ವಿಶೇಷ ಮನವಿ ಮಾಡಿದ್ದ ದರ್ಶನ್ ದಂಪತಿ
ವಿವಾಹ ವಾರ್ಷಿಕೋತ್ಸವದ ನಿಮಿತ್ತ ಪತಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ವಿಜಯಲಕ್ಷ್ಮಿ ಹಾಗೂ ನಟ ದರ್ಶನ್ ಇಬ್ಬರೂ ಜೈಲಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಮಾಡಿಕೊಂಡಿದ್ದರು. ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಿಚಾರವಾಗಿ ಹಿನ್ನಡೆಯಾಗಿರುವುದರಿಂದ ದರ್ಶನ್ ಮಾನಸಿಕವಾಗಿ ನೊಂದಿದ್ದಾರೆ. ಅವರಿಗೆ ಕುಟುಂಬದ ಕಡೆಯಿಂದ ಧೈರ್ಯ ತುಂಬುವ ಅಗತ್ಯವಿದೆ ಎಂದು ವಿಜಯಲಕ್ಷ್ಮಿ ಅವರು ಕಾರಾಗೃಹಗಳ ಮುಖ್ಯಸ್ಥರಾದ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದಿದ್ದರು.

ಮತ್ತೊಂದೆಡೆ ದರ್ಶನ್ ಕೂಡ ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಮನವಿ ಸಲ್ಲಿಸಿ, "ಸಾಮಾನ್ಯ ಸಂದರ್ಶಕರ ಜಾಗದಲ್ಲಿ ಕುಟುಂಬದವರೊಂದಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪತ್ನಿ ಮತ್ತು ಮಗನೊಂದಿಗೆ ಕೊಠಡಿಯೊಳಗೆ ಮುಖಾಮುಖಿ ಮಾತುಕತೆಗೆ ಪ್ರತ್ಯೇಕ ಅವಕಾಶ ಕಲ್ಪಿಸಬೇಕು" ಎಂದು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಅಧಿಕಾರಿಗಳು ನಿಯಮಾವಳಿಗಳ ಅನ್ವಯವೇ ಭೇಟಿಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇಂದು ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್, ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಕುಗ್ಗದಂತೆ ಪತಿಗೆ ವಿಜಯಲಕ್ಷ್ಮಿ ಅವರು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಜೈಲಿನ ನಿಯಮಗಳ ವ್ಯಾಪ್ತಿಯಲ್ಲೇ ಈ ಭಾವುಕ ಕ್ಷಣಗಳ ಭೇಟಿ ನಡೆದಿದ್ದು, ದರ್ಶನ್ ಅವರ ಸುದೀರ್ಘ ದಿನಗಳ ಆಸೆಯೊಂದು ಈಡೇರಿದಂತಾಗಿದೆ.
ರೇಂಜ್ ರೋವರ್‌ನಲ್ಲಿ ಬಂದಿಳಿದ ದರ್ಶನ್ ಕುಟುಂಬ
ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರು ಇಂದು ಬೆಳಗ್ಗೆ ತಮ್ಮ ಐಷಾರಾಮಿ ರೇಂಜ್ ರೋವರ್ (Range Rover) ಕಾರಿನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಆವರಣದ ಸಮೀಪಕ್ಕೆ ಬಂದಿಳಿದರು. ಭದ್ರತೆಯ ದೃಷ್ಟಿಯಿಂದ ಕಾರನ್ನು ಜೈಲಿನ ಹೊರಭಾಗದಲ್ಲೇ ನಿಲ್ಲಿಸಿ, ಅಲ್ಲಿಂದ ಜೈಲಿನ ಮುಖ್ಯ ಚೆಕ್ ಪೋಸ್ಟ್‌ವರೆಗೆ ತಾಯಿ-ಮಗ ಇಬ್ಬರೂ ನಡೆದುಕೊಂಡೇ ಸಾಗಿದರು. ಇವರ ಜೊತೆಯಲ್ಲಿ ಮತ್ತೊಬ್ಬ ಮಹಿಳೆ ಕೂಡ ಜೈಲಿನ ಒಳಗೆ ಪ್ರವೇಶಿಸಿದ್ದು, ಅವರು ಯಾರು ಎಂಬ ಕುತೂಹಲ ಮೂಡಿದೆ. ಜೈಲಿನ ಮುಖ್ಯ ಅಧೀಕ್ಷಕರಿಂದ ಅಧಿಕೃತ ಅನುಮತಿ ಸಿಕ್ಕ ಬಳಿಕ ಇವರೆಲ್ಲರೂ ನೇರವಾಗಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಶೇಷ ದಿನದಂದು ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗಾಗಿ ವಿಶೇಷವಾಗಿ ವಿವಿಧ ಬಗೆಯ ಹಣ್ಣುಗಳನ್ನು ತಂದಿದ್ದರು. ಜೈಲಿನ ನಿಯಮಾವಳಿಗಳ ಪ್ರಕಾರ ತಪಾಸಣೆ ನಡೆಸಿದ ನಂತರ, ದರ್ಶನ್ ಅವರ ಮ್ಯಾನೇಜರ್ ಮೂಲಕ ಈ ಹಣ್ಣುಗಳ ಕಿಟ್ ಅನ್ನು ಜೈಲಿನ ಒಳಗಡೆ ಕೊಂಡೊಯ್ದರು. ಪ್ರತಿ ವರ್ಷ ಯಾವಾಗಲೂ ಅದ್ಧೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದ ಈ ದಂಪತಿ, ಈ ಬಾರಿ ಪರಿಸ್ಥಿತಿಯ ಒತ್ತಡದಿಂದಾಗಿ ಜೈಲಿನಲ್ಲಿ ಭೇಟಿಯಾಗಿ ಕೆಲ ಕಾಲ ಭಾವುಕರಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಇವರ ಭೇಟಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.













Click it and Unblock the Notifications