ಬೆಂಗಳೂರಲ್ಲಿ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಖಡಕ್ ಸೂಚನೆ: ಮಳೆ ನೀರು ಸಮಸ್ಯೆ ಪರಿಹಾರಕ್ಕೆ ಸಿದ್ಧತೆ
Bengaluru: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೇ 19ರ ಮಂಗಳವಾರ ನಗರ ಪಾಲಿಕೆಯ ವಿವಿಧ ಕಾಮಗಾರಿಗಳು ಹಾಗೂ ಮಳೆಗಾಲ ಪೂರ್ವ ಸಿದ್ಧತೆ ಕುರಿತು ವಿಡಿಯೋ ಸಂವಾದದ ಮೂಲಕ ಸಮಗ್ರ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯಲ್ಲಿ SIP ಹಾಗೂ CMIDP ಯೋಜನೆಗಳಡಿ ನಡೆಯುತ್ತಿರುವ ಕಾಮಗಾರಿಗಳು, 694 ಕೋಟಿ ರೂ. ಅನುದಾನದ ಕಾಮಗಾರಿಗಳ ಪ್ರಗತಿ, ರಸ್ತೆ ಗುಂಡಿ ಮುಚ್ಚುವಿಕೆ, ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ, ಟೋಯಿಂಗ್ ವಾಹನಗಳ ಕಾರ್ಯಾಚರಣೆ, ಟ್ರಾನ್ಸ್‌ಫರ್ ಸ್ಟೇಷನ್‌ಗಳ ನಿರ್ವಹಣೆ, ರಸ್ತೆ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆ, ಸ್ಕೈವಾಕ್ ಟೆಂಡರ್ ಪ್ರಕ್ರಿಯೆ, ನೀರು ನಿಲುವು ಪ್ರದೇಶಗಳು ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಅಪಾಯಕಾರಿ ಮರಗಳು ಮತ್ತು ಕೊಂಬೆಗಳ ಪಟ್ಟಿಯ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾಗಿ ಚರ್ಚೆ ನಡೆಸಲಾಯಿತು.

ಎಲ್ಲಾ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲು ಸೂಚನೆ
ಇನ್ನು ಆಯುಕ್ತರು ಎಲ್ಲಾ ವಿಭಾಗಗಳ ಅಧಿಕಾರಿಗಳೊಂದಿಗೆ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಮಳೆಗಾಲಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚುವುದು, ನೀರು ನಿಲುವು ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚರಂಡಿ ಮತ್ತು ರಸ್ತೆ ನಿರ್ವಹಣಾ ಕಾಮಗಾರಿಗಳನ್ನು ವೇಗಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಈ ಶನಿವಾರದೊಳಗೆ ಸಾಧ್ಯವಾದಷ್ಟು ಹೆಚ್ಚು ಕಾಮಗಾರಿಗಳನ್ನು ಪೂರ್ಣಗೊಳಿಸಿ, ಕಾರ್ಯಗತಗೊಳಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಮಳೆಗಾಲ ಆರಂಭವಾಗುವ ಮೊದಲು ಈ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದ್ದರೂ ಇನ್ನೂ ಬಾಕಿ ಉಳಿದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಮಳೆಗಾಲ ಆರಂಭವಾದ ಬಳಿಕ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟವಾಗುವುದರಿಂದ ಈ ತಿಂಗಳ ಅಂತ್ಯದೊಳಗೆ ಆದ್ಯತೆ ಮೇರೆಗೆ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ರಸ್ತೆ ಕಾಮಗಾರಿಗಳಿಗೆ ಅಗತ್ಯವಿರುವ ಬಿಟುಮಿನ್ ಹಾಗೂ ಅಸ್ಫಾಲ್ಟ್ ಮತ್ತು ಇತರೆ ಸಾಮಾಗ್ರಿಗಳ ಲಭ್ಯತೆ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರ ಪಾಲಿಕೆಯ ಆನ್‌ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆಯ ಟೆಂಡರ್ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಕೈವಾಕ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ಕೈವಾಕ್ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಆರ್. ಲತಾ, ಮುಖ್ಯ ಎಂಜಿನಿಯರರಾದ ರಾಘವೇಂದ್ರ ಪ್ರಸಾದ್ ಹಾಗೂ ಯಮುನಾ, ಅಧೀಕ್ಷಕ ಎಂಜಿನಿಯರರು, ಕಾರ್ಯಪಾಲಕ ಎಂಜಿನಿಯರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications