ಸಿಎಸ್‌ಕೆ-ಎಸ್‌ಆರ್‌ಎಚ್ ಪಂದ್ಯದ ವೇಳೆ ಗಲಾಟೆ ಮಾಡಿಕೊಂಡ ಸಂಜು ಸ್ಯಾಮ್ಸನ್, ಹೆನ್ರಿಚ್ ಕ್ಲಾಸೆನ್
CSK Vs SRH IPL 2026: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2026ರ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಹೆನ್ರಿಚ್ ಕ್ಲಾಸನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ದೃಶ್ಯ ಇದೀಗ ಎಲ್ಲಡೆ ವೈರಲ್ದ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತವರು ಮೈದಾನ ಚೆಪಾಕ್‌ನಲ್ಲಿ ಈ ಸೀಸನ್‌ನ ತಮ್ಮ ಕೊನೆಯ ಪಂದ್ಯವನ್ನು ಆಡಿದ ಸಿಎಸ್‌ಕೆ 5 ವಿಕೆಟ್‌ಗಳ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿತು. ಸಿಎಸ್‌ಕೆ ಪರ ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 44 ರನ್ ಕೊಡುಗೆ ನೀಡಿದರು.

ಸಿಎಸ್‌ಕೆ ನೀಡಿದ ಗುರಿಯನ್ನು ಬೆನ್ನಟ್ಟಿದ ಎಸ್‌ಆರ್‌ಹೆಚ್ ತಂಡವು ಇಶಾನ್ ಕಿಶನ್ (70) ಮತ್ತು ಹೆನ್ರಿಚ್ ಕ್ಲಾಸನ್ (47) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಹಾದಿ ಈಗ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಸಂಜು, ಕ್ಲಾಸೆನ್ ನಡುವೆ ವಾಗ್ವಾದ
ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಸ್ಟಂಪ್ ಔಟ್ ಆದ ನಂತರ ಸಂಜು ಸ್ಯಾಮ್ಸನ್ ಮತ್ತು ಕ್ಲಾಸೆನ್ ನಡುವೆ ವಾಕ್ಸಮರ ನಡೆಯಿತು. ಅಂತಿಮವಾಗಿ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೂ ಇದೀಗ ಈ ದೃಶ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿವೆ.
ಕ್ಲಾಸೆನ್ ತೀವ್ರ ಅಸಮಾಧಾನ
ಸಿಎಸ್‌ಕೆ ಪರ ನೂರ್ ಅಹ್ಮದ್ ಬೌಲಿಂಗ್ ಮಾಡಿದ 15ನೇ ಓವರ್‌ನಲ್ಲಿ ಜಟಾಪಟಿ ನಡೆಯಿತು. ಸಂಜು ಸ್ಯಾಮ್ಸನ್ ಅವರು ಅತಿ ವೇಗವಾಗಿ ಹೆನ್ರಿಚ್ ಕ್ಲಾಸನ್ ಅವರನ್ನು ಸ್ಟಂಪ್ ಔಟ್ ಮಾಡಿದ್ದು, ಅಭಿಮಾನಿಗಳಿಗೆ ದಿಗ್ಗಜ ಎಂ.ಎಸ್. ಧೋನಿಯವರ ವಿಕೆಟ್ ಕೀಪಿಂಗ್ ಕೌಶಲವನ್ನು ನೆನಪಿಸಿತು. 6 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಭರ್ಜರಿ ಲಯದಲ್ಲಿದ್ದ ಕ್ಲಾಸನ್ ಔಟ್ ಆದ ನಂತರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
47 ರನ್ ಗಳಿಸಿ ಅಪಾಯಕಾರಿಯಾಗಿದ್ದ ಕ್ಲಾಸನ್ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ನೀಡಲು ಸಿಎಸ್‌ಕೆ ಪ್ರಯತ್ನಿಸಿತು. ಕ್ಲಾಸನ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳುವ ವೇಳೆ ಅವರು ಸಂಜು ಸ್ಯಾಮ್ಸನ್ ಅವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂದಿತು. ಈ ವೇಳೆ ಸ್ಯಾಮ್ಸನ್ ಕೂಡ ತಿರುಗೇಟು ನೀಡಿದ್ದರಿಂದ ಪರಿಸ್ಥಿತಿ ಕ್ಷಣಾರ್ಧದಲ್ಲಿ ಉಲ್ಬಣಗೊಂಡಿತು. ಇದರ ಪರಿಣಾಮವಾಗಿ ಇಬ್ಬರು ಆಟಗಾರರ ನಡುವೆ ಕೆಲ ಕಾಲ ವಾದ-ವಿವಾದ ನಡೆಯಿತು.
ಸಾಮಾನ್ಯವಾಗಿ ಶಾಂತವಾಗಿರುವ ಸಂಜು ಸ್ಯಾಮ್ಸನ್ ಕೂಡ ಕೋಪಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಪಂದ್ಯದ ಒತ್ತಡ ಮತ್ತು ಪ್ಲೇಆಫ್ ಲೆಕ್ಕಾಚಾರಗಳು ಆಟಗಾರರ ನಡುವಿನ ಈ ಘರ್ಷಣೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಶಿವಂ ದುಬೆ, ನೂರ್ ಅಹ್ಮದ್ ಮತ್ತು ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರೂ ಆಟಗಾರರನ್ನು ಸಮಾಧಾನಪಡಿಸುವ ಮೂಲಕ ಮೈದಾನದಲ್ಲಿದ್ದ ಉದ್ವಿಗ್ನತೆಯನ್ನು ತಿಳಿಗೊಳಿಸಿದರು.
ಪಂದ್ಯದ ಕುರಿತು ಹೇಳುವುದಾದರೆ ಇಶಾನ್ ಕಿಶನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗಳ ಜಯ ಸಾಧಿಸಿದ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಹೈದರಾಬಾದ್‌ನ ಈ ಗೆಲುವು ಗುಜರಾತ್ ಟೈಟಾನ್ಸ್ ತಂಡಕ್ಕೂ ಪ್ಲೇಆಫ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿತು. ಹಾಲಿ ಚಾಂಪಿಯನ್ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಅರ್ಹತೆ ಪಡೆದಿದ್ದು, ಈಗ ನಾಕೌಟ್ ಹಂತಕ್ಕೆ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ.
5 ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಇನ್ನೂ ಪ್ಲೇಆಫ್ ರೇಸ್‌ನಲ್ಲಿದೆ. ಆದರೆ ಅವರು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಬೇಕು ಮತ್ತು ಇತರ ಪಂದ್ಯಗಳ ಫಲಿತಾಂಶಗಳು ತಮ್ಮ ಪರವಾಗಿ ಬರಲಿ ಎಂದು ಪ್ರಾರ್ಥಿಸಬೇಕಿದೆ. ಇನ್ನು ಪಂದ್ಯದ ಬಳಿಕ ಮಾತನಾಡಿದ ಎಸ್‌ಆರ್‌ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್, "ಇಂದಿನ ಪಂದ್ಯ ನಿಜವಾಗಿಯೂ ತೃಪ್ತಿ ತಂದಿದೆ. ಇದು ನಮ್ಮ ಸಾಮಾನ್ಯ ಆಟಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ಬ್ಯಾಟಿಂಗ್ ಮಾಡಲು ಇದು ಸಾಕಷ್ಟು ಕಷ್ಟಕರವಾದ ಪಿಚ್ ಆಗಿತ್ತು. ಕ್ಲಾಸನ್ ಮತ್ತು ಇಶಾನ್ ಚೇಸ್ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಹಾಗಾಗಿ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.












Click it and Unblock the Notifications