ಶಾಲಾ ಪಠ್ಯದಲ್ಲಿ ಸಂಗೀತ, ಯೋಗ ಮತ್ತು ರಂಗ ಶಿಕ್ಷಣಗಳ ಸೇರ್ಪಡೆ
ಶಾಲಾ ಪಠ್ಯದಲ್ಲಿ ಸಂಗೀತ, ಯೋಗ ಮತ್ತು ರಂಗ ಶಿಕ್ಷಣಗಳ ಸೇರ್ಪಡೆ
ಅಕ್ಷರ ದಾಸೋಹದ ಕಾಮಗಾರಿಗಳು ವರ್ಷದೊಳಗೆ ಮುಕ್ತಾಯ
ಎಸ್.ಎಂ.ಕೃಷ್ಣ ಸರ್ಕಾರದ ಭವಿಷ್ಯ ನಿರ್ಧಾರವಾಗಲಿರುವ ಮುಹೂರ್ತ ಹತ್ತಿರವಾಗುತ್ತಿರುವ ಸಂದರ್ಭದಲ್ಲಿಯೇ ಪ್ರಾಥಮಿಕ ಶಿಕ್ಷಣ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್ ಅವರು- ಸಂಗೀತ, ಯೋಗ ಮತ್ತು ರಂಗ ತರಬೇತಿಯ ಮೂರು ವಿಷಯಗಳನ್ನು ಬರಲಿರುವ ಶೈಕ್ಷಣಿಕ ವರ್ಷದಿಂದ ಪಠ್ಯ ವಿಷಯದಲ್ಲಿ ಅಳವಡಿಸುವುದಾಗಿ ತಿಳಿಸಿದ್ದಾರೆ. ಮಕ್ಕಳಿಗೆ ಸಂಗೀತ ಮತ್ತು ರಂಗ ತರಬೇತಿಯನ್ನು ಮೂರನೆಯ ತರಗತಿಯಿಂದಲೂ, ಯೋಗ ಶಿಕ್ಷಣವನ್ನು ಐದನೆಯ ತರಗತಿಯಿಂದಲೂ ಅಳವಡಿಸಲಾಗುವುದು ಎಂದು ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಗೀತ ಶಿಕ್ಷಣದ ಪಠ್ಯ ವಿಷಯಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಜಾನಪದ ಸಂಗೀತವನ್ನೂ ಪಠ್ಯ ಒಳಗೊಂಡಿದೆ. ಉಳಿದ ವಿಷಯಗಳನ್ನು ಬೋಧನೆ ಮಾಡುವ ಶಿಕ್ಷಕರು ಮೊದಲಿನಂತೆ ತರಗತಿಗಳನ್ನು ನಡೆಸುತ್ತಾರೆ. ಆದರೆ ಅವರಿಗೆ ಹೊಸ ಪಠ್ಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.
ಹೊಸದಾಗಿ ಪರಿಚಯಿಸುತ್ತಿರುವ ಮೂರು ವಿಷಯಗಳಿಗೆ ವಾರದಲ್ಲಿ ಮೂರು ತರಗತಿಗಳನ್ನು ನಡೆಸಲಾಗುವುದು. ಪ್ರತಿ ತರಗತಿಯ ಅವಧಿ ಒಂದು ಗಂಟೆ. ಬುದ್ಧಿಮತ್ತೆಗೆ ಒರೆ ಹಚ್ಚುವ ವಿಷಯಗಳೆಂದು ಪರಿಗಣಿಸಲ್ಪಟ್ಟ ವಿಜ್ಞಾನ ಮತ್ತು ಗಣಿತ ತರಗತಿಗಳ ನಡುವಿನ ಅವಧಿಯನ್ನು ಇವುಗಳಿಗೆ ಮೀಸಲಿಡಲಾಗುವುದು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಅಕ್ಷರ ದಾಸೋಹ ಯೋಜನೆಯ ಬಗ್ಗೆ ಮಾತನಾಡಿದ ಸಚಿವರು- ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಅಡುಗೆಮನೆಯ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು ಬಹುತೇಕ ಕಡೆ 6 ತಿಂಗಳಿಂದ ಒಂದು ವರ್ಷದೊಳಗೆ ಕಾಮಗಾರಿಗಳು ಮುಗಿಯಲಿವೆ ಮತ್ತು ಶಾಲೆಗಳಲ್ಲಿ ನೀರಿನ ವ್ಯವಸ್ಥೆಗೆಂದು ಸರ್ಕಾರವು ಪ್ರತಿ ಶಾಲೆಗಳಿಗೆ ರೂ. 6,000 ಮಂಜೂರು ಮಾಡಿದೆ ಎಂದು ತಿಳಿಸಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications