18ನೇ ಪರ್ವ : 3 ವಿಧಾನಸಭೆ, 539 ಲೋಕಸಭೆ ಕ್ಷೇತ್ರದ ಮತ ಎಣಿಕೆ
18ನೇ ಪರ್ವ : 3 ವಿಧಾನಸಭೆ, 539 ಲೋಕಸಭೆ ಕ್ಷೇತ್ರದ ಮತ ಎಣಿಕೆ
ರಾಜ್ಯದಲ್ಲಿ ಮತ ಎಣಿಕೆಗೆ ವ್ಯಾಪಕ ಸಿದ್ಧತೆ, ಬಿಗಿ ಭದ್ರತೆ
ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ವಿದ್ಯುನ್ಮಾನ ಮತಯಂತ್ರ ಬಳಕೆಯ ಕಾರಣ ಮಧ್ಯಾಹ್ನದ ವೇಳೆಗೆ ಬಹುತೇಕ ಕ್ಷೇತ್ರಗಳ ಟ್ರೆಂಡ್ ಸ್ಪಷ್ಟವಾಗಲಿದೆ. ಸಂಜೆಯ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಚುನಾವಣಾ ಫಲಿತಾಂಶದ ಪ್ರಕಟಣೆಗೆ ಚುನಾವಣಾ ಆಯೋಗ ವ್ಯಾಪಕ ಸಿದ್ಧತೆ ನಡೆಸಿದೆ. ದೇಶದ ವಿವಿಧ ಭಾಗಗಳ ಒಟ್ಟು 1200 ಕೇಂದ್ರಗಳಲ್ಲಿ ಮತ ಎಣಿಕೆ ಏಕಕಾಲದಲ್ಲಿ ನಡೆಯಲಿದೆ. ಎಲ್ಲ ಮತ ಎಣಿಕೆ ಕೇಂದ್ರಗಳಿಗೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.
543 ಲೋಕಸಭಾ ಕ್ಷೇತ್ರಗಳ ಪೈಕಿ ಮಣಿಪುರ ಹಾಗೂ ಬಿಹಾರದ ಮೂರು ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುವುದಿಲ್ಲ . ಇದರಲ್ಲಿ ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಸ್ಪರ್ಧಿಸುತ್ತಿರುವ ಪ್ರತಿಷ್ಠಿತ ಛಾಪ್ರಾ ಕ್ಷೇತ್ರವೂ ಸೇರಿದೆ.
ಕರ್ನಾಟಕದಲ್ಲಿ ವ್ಯಾಪಕ ಸಿದ್ಧತೆ : ರಾಜ್ಯದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಮತ ಎಣಿಕೆಗಾಗಿ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲಿ ಎಣಿಕೆಯ ವಿವರಗಳನ್ನು ಆಯಾ ಕ್ಷಣದಲ್ಲಿ ಚುನಾವಣಾ ಆಯೋಗಕ್ಕೆ ರವಾನಿಸಲು ಅನುಕೂಲವಾಗುವಂತೆ ಕಂಪ್ಯೂಟರ್ ಜಾಲದ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಚ್.ಸಿ.ನಾಗೇಂದ್ರ ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ವಿದ್ಯುನ್ಮಾನ ಉಪಕರಣಗಳನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ. ಮತ ಎಣಿಕೆ ಪ್ರಯುಕ್ತ ರಾಜ್ಯದಲ್ಲಿ ಮೇ 12, ಬುಧವಾರ ಸಂಜೆ 5ರಿಂದ ಮೇ 13ರ ಗುರುವಾರ ರಾತ್ರಿ 12ರ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಾಗೇಂದ್ರ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications