ಗುಲ್ಬರ್ಗಾದಿಂದ ಸರಿದ ಸೂರ್ಯರಥ ; ಬೇಸಗೆಯಲಿ ತಂಪಿನ ಬಿಡಾರ
ಗುಲ್ಬರ್ಗಾದಿಂದ ಸರಿದ ಸೂರ್ಯರಥ ; ಬೇಸಗೆಯಲಿ ತಂಪಿನ ಬಿಡಾರ
ಮೂವತ್ತರಿಂದ ನಲವತ್ತರ ಆಸುಪಾಸಲ್ಲಿ ಉಷ್ಣತೆಯ ಉಯ್ಯಾಲೆ
ಏಪ್ರಿಲ್ 22ರ ಮುಹೂರ್ತದಂದೆ ಗುಲ್ಬರ್ಬಾದ ಹವೆಯ ಜಾತಕ ಬದಲಾಗಿದೆ. ಅಂದು ಮೂರು ತಾಸುಗಳ ಕಾಲ ಸುರಿದ ಎಡೆಬಿಡದ ಮಳೆ ಗುಲ್ಬರ್ಗಾದಲ್ಲಿ ಹಾಸಿ ಹೋದ ತಂಪಿನ ಸೆರಗು ಮೇ ಮೊದಲ ವಾರದಲ್ಲೂ ಸರಿದಿಲ್ಲ . ಆನಂತರ ಕಣ್ಣಾಮುಚ್ಚಾಲೆಯಂತೆ ಸುರಿಯುತ್ತಿರುವ ಮಳೆಯಿಂದಾಗಿ ತಂಪು ಹವೆ ಮುಂದುವರೆದಿದೆ. ಅಂದಹಾಗೆ, ಬೇಸಗೆಯಲ್ಲಿ ಈ ರೀತಿಯ ತಂಪು ಹವೆಯನ್ನು ಗುಲ್ಬರ್ಗಾ ಎಂಬ ಬಿಸಿಲುನಗರಿ ಕಂಡು ದಶಕದ ಮೇಲಾಗಿತ್ತು .
ಈ ಸಲದ ಬೇಸಗೆಯ ಪ್ರಖರ ದಿನಗಳಲ್ಲಿ 44 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಸುಳಿದಾಡುತ್ತಿದ್ದ ಗುಲ್ಬರ್ಗಾದ ಉಷ್ಣಾಂಶ ಮಳೆಯ ನಂತರ 37ಕ್ಕೆ ಕುಸಿಯಿತು. ಸಾಮಾನ್ಯವಾಗಿ ಈ ದಿನಗಳಲ್ಲಿ 45ರಿಂದ 47ರವರೆಗೆ ಸುಳಿದಾಡುತ್ತಿದ್ದ ಉಷ್ಣತಾ ಮಾಪಕದಲ್ಲಿನ ಪಾದರಸ, ಮಳೆ ಮಹಿಮೆಯಿಂದಾಗಿ ನಲವತ್ತರ ಆಸುಪಾಸಲ್ಲೇ ಉಯ್ಯಾಲೆಯಾಡುತ್ತಿದೆ. ಉಷ್ಣಾಂಶ 30 ಡಿಗ್ರಿಗೆ ಇಳಿದು ಗುಲ್ಬರ್ಗಾದ ಹಿರಿಯರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದೂ ಉಂಟು.
ಮಳೆಯಿಂದಾಗಿ ಜನರ ಜೀವನ ಶೈಲಿಯಲ್ಲೂ ಎಂದಿನ ಬೇಸಗೆಗಳಲ್ಲಾಗುವಂತೆ ಬದಲಾವಣೆಗಳು ಈ ಬಾರಿ ಕಾಣಿಸಿಕೊಂಡಿಲ್ಲ . ಜನರು ಮಧ್ಯಾಹ್ನದ ಹೊತ್ತು ಮನೆಯಾಳಗೇ ಉಳಿಯುತ್ತಿಲ್ಲ . ಪೇಟೆ ಮಾರುಕಟ್ಟೆಗಳು ಭಣಭಣಗುಟ್ಟುತ್ತಿಲ್ಲ . ಎಲ್ಲರೂ ಮಳೆರಾಯನಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ.
ಮಳೆಯ ಹದವಾದ ಸಂಗೀತ ಹೀಗೆಯೇ ಮುಂದುವರಿಯಲಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications