ಕನ್ನಡ ಗಣಕ ಪರಿಷತ್ತಿನಿಂದ ‘ಕನ್ನಡ ಗ್ರಂಥ ಸಂಪದ’ ವೆಬ್‌ಸೈಟ್
ಕನ್ನಡ ಗಣಕ ಪರಿಷತ್ತಿನಿಂದ ‘ಕನ್ನಡ ಗ್ರಂಥ ಸಂಪದ’ ವೆಬ್‌ಸೈಟ್
ಕನ್ನಡದ ಎಲ್ಲ ಪುಸ್ತಕಗಳ ಕುರಿತು ಅಂತರ್ಜಾಲ ತಾಣದಲ್ಲಿ ಮಾಹಿತಿ
ಕನ್ನಡ ಪುಸ್ತಕ ಲೋಕದ ಮಾಹಿತಿಯನ್ನು ನೀಡುವ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿ ಪಡಿಸುವ ‘ಕನ್ನಡ ಗಣಕ ಪರಿಷತ್’ನ ಚಿಂತನೆ ಕಾರ್ಯರೂಪಕ್ಕೆ ಬಂದಿದ್ದು , ‘ಕನ್ನಡ ಗ್ರಂಥ ಸಂಪದ’ ಎನ್ನುವ ವೆಬ್‌ಸೈಟ್ ಫೆ.26, ಗುರುವಾರ ಸಂಜೆ ಅನಾವರಣಗೊಳ್ಳಲಿದೆ. ಕನ್ನಡದ ಎಲ್ಲ ಪುಸ್ತಕಗಳ ಕುರಿತು ಮಾಹಿತಿಯನ್ನು ಒದಗಿಸುವುದು ಈ ಅಂತರ್ಜಾಲ ತಾಣದ ಆಶಯ ಎಂದು ಗಣಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚಿ.ವಿ. ಶ್ರೀನಾಥಶಾಸ್ತ್ರೀ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಪಂಪ‘ ಸಭಾಂಗಣದಲ್ಲಿ ‘ಕನ್ನಡ ಗ್ರಂಥ ಸಂಪದ’ ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ನಡೆಯಲಿದೆ. ಫೆ.26, ಗುರುವಾರ ಸಂಜೆ 5.30 ಕ್ಕೆ ಕಾರ್ಯಕ್ರಮ ಶುರು.
ಲೇಖಕ ಹಾಗೂ ಜನಪ್ರಿಯ ಅಂಕಣಕಾರ ಡಾ.ಎಚ್ಚೆಸ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ‘ಕನ್ನಡ ಗ್ರಂಥ ಸಂಪದ’ ಜಾಲತಾಣ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾ ಗಣೇಶ್ ಕಾರ್ಯಕ್ರಮದ ಮುಖ್ಯ ಅತಿಥಿಗಳು.
ಅಂದಹಾಗೆ, ‘ನುಡಿ’ ಉಚಿತ ತಂತ್ರಾಂಶದ ನಾಲ್ಕನೇ ಆವೃತ್ತಿ ಈಗ ಲಭ್ಯವಿದೆ. ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಗಣಕ ಪರಿಷತ್‌ನ ಚಟುವಟಿಕೆಗಳ ಬಗ್ಗೆ ತಿಳಿಯಲು http://www.kagapa.org ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ. (ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications