ಬೆಂಗಳೂರಿನ ರಸ್ತೆಗಳಲ್ಲಿ ಜ.30ರಿಂದ ಹವಾ ನಿಯಂತ್ರಿತ ಬಸ್ಸುಗಳು!
ಬೆಂಗಳೂರಿನ ರಸ್ತೆಗಳಲ್ಲಿ ಜ.30ರಿಂದ ಹವಾ ನಿಯಂತ್ರಿತ ಬಸ್ಸುಗಳು!
ಬಿಎಂಟಿಸಿಯಿದ ಪರಿಸರ ವಾಹಿನಿ ಬಸ್ಸುಗಳ ಸಂಚಾರ ಪ್ರಾರಂಭ
ಹವಾ ನಿಯಂತ್ರಿತ ಬಸ್ಸುಗಳು ಎಂದಾಕ್ಷಣ ಖಾಸಗಿ ಸೇವೆ ಎಂದುಕೊಳ್ಳಬೇಕಿಲ್ಲ : ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅನೇಕ ಪ್ರಯೋಗಗಳಿಗೆ ಮುಂದಾಗುತ್ತಿದ್ದು , ತನ್ನ ಪ್ರಯೋಗಶೀಲತೆಯ ಒಂದು ಭಾಗವಾಗಿ ಹವಾ ನಿಯಂತ್ರಿತ ಬಸ್ಸುಗಳನ್ನು ಜನವರಿ 30ರಿಂದ ರಸ್ತೆಗೆ ಬಿಡಲಿದೆ.
ಕಾರುಗಳಲ್ಲಿ ಓಡಾಡುವ ಮಂದಿಯನ್ನು ಹಾಗೂ ವಿದೇಶಿ ಪ್ರವಾಸಿಗರನ್ನು ಬಸ್ಸುಗಳಿಗೆ ಸೆಳೆಯುವುದು ಈ ಎಸಿ ಬಸ್ಸುಗಳ ಉದ್ದೇಶ. ಹೊಸ ವರ್ಷದ ಕೊಡುಗೆಯಾಗಿ ಜನವರಿ 1ರಿಂದ ಈ ಬಸ್ಸುಗಳು ರಸ್ತೆಗಿಳಿಯಬೇಕಿತ್ತು . ಆದರೆ ತಾಂತ್ರಿಕ ಕಾರಣಗಳಿಂದಾಗಿ ಕೊಂಚ ವಿಳಂಬವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಆರ್.ವಿ.ದೇವರಾಜ್ ಹೇಳುತ್ತಾರೆ.
ದೇವರಾಜ್ ಹೇಳುವ ಪ್ರಕಾರ ಹವಾ ನಿಯಂತ್ರಿತ ಬಸ್‌ಗಳ ತಂತ್ರಜ್ಞಾನ ಉನ್ನತವಾಗಿದ್ದು , ಈ ಬಸ್‌ಗಳು ಆಟೊರಿಕ್ಷಾದಷ್ಟು ಸದ್ದನ್ನು ಮಾತ್ರ ಹೊರಡಿಸುತ್ತವೆ. ಯೂರೊ-2 ಮಾದರಿಯ ಈ ಬಸ್‌ಗಳು ಪರಿಸರಸ್ನೇಹಿ ಕೂಡ. 32 ಸೀಟ್‌ಗಳ ಸಾಮರ್ಥ್ಯದ ಈ ಬಸ್‌ಗಳು ಸುಖಾಸೀನ ಸವಲತ್ತು ಹೊಂದಿವೆ.
ಹವಾ ನಿಯಂತ್ರಿತ ಬಸ್‌ಗಳಲ್ಲಿ ಸ್ಟೇಜ್‌ಗಳ ಕಿರಿಕಿರಿಯಿಲ್ಲ . ಪ್ರಯಾಣ ದರ ಪ್ರತಿ ಪ್ರಯಾಣಿಕನಿಗೆ 15 ರುಪಾಯಿ. ಪ್ರಸ್ತುತ 10 ಬಸ್‌ಗಳು ಮಾತ್ರ ಸಂಚರಿಸಲಿದ್ದು , ವರ್ಷಾಂತ್ಯದ ವೇಳೆಗೆ ಇನ್ನೂ 40 ಹವಾ ನಿಯಂತ್ರಿತ ಬಸ್ಸುಗಳು ರಸ್ತೆಗಿಳಿಯಲಿವೆ.
ಪರಿಸರ ವಾಹಿನಿ ಬಸ್ : ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಉಪಯುಕ್ತ ಎನ್ನಲಾದ ಮಲೇಷಿಯಾ ಮಾದರಿಯ ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಶುಕ್ರವಾರ (ಜ.9)ದಿಂದ ಪ್ರಾರಂಭಿಸಿದೆ. ಈ ನೂತನ ಬಸ್‌ಗಳನ್ನು ಪರಿಧಿಸರ ವಾಹಿನಿ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಇಂತಹ ಬಸ್‌ಗಳ ಓಡಾಟ ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications