ಭಾರತದಲ್ಲಿ ಏಡ್ಸ್ ನಾಗಾಲೋಟ, ಕರ್ನಾಟಕದಲ್ಲೂ ಭಾರೀ ಕಾಟ
ಭಾರತದಲ್ಲಿ ಏಡ್ಸ್ ನಾಗಾಲೋಟ, ಕರ್ನಾಟಕದಲ್ಲೂ ಭಾರೀ ಕಾಟ
ಎಚ್‌ಐವಿ ಹೆಂಗಸರು ರಾಜ್ಯದಲ್ಲಿ ಹೆಚ್ಚು - ಸಮೀಕ್ಷೆಗೇ 75000 ಡಾಲರ್ ಖರ್ಚು
- ಏಡ್ಸ್ ಪೀಡಿತ ಹೆಂಗಸರ ಸಂಖ್ಯೆ ಇಡೀ ದೇಶದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಹೆಚ್ಚು.
- ಭಾರತದಲ್ಲಿ ಏಡ್ಸ್ ಪೀಡಿತರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ.
- ಏಡ್ಸ್ ಪೀಡಿತರ ಪೈಕಿ ಪ್ರತಿಶತ 26ರಷ್ಟು ಹೆಂಗಸರು.
- ಭಾರತದಲ್ಲಿ ಎಚ್‌ಐವಿ ಪಾಸಿಟಿವ್ ಸೋಂಕು ತಗಲಿರುವವರಲ್ಲಿ ಪ್ರತಿಶತ 1 ಕ್ಕೂ ಹೆಚ್ಚು ಗರ್ಭಿಣಿಯರಿದ್ದಾರೆ.
- ಲೈಂಗಿಕ ಕಾರ್ಯಕರ್ತರಲ್ಲಿ 50 ಪ್ರತಿಶತ ಹೆಂಗಸರು ಎಚ್‌ಐವಿ ಸೋಂಕು ಪೀಡಿತರು.
ಬಿಲ್ ಮತ್ತು ಮೆಲಿಂಡ ಗೇಟ್ಸ್ ಪ್ರತಿಷ್ಠಾನದ ಹಣಕಾಸಿನ ನೆರವಿನಿಂದ ನಡೆಸಲಾದ ಈ ಮಹತ್ವದ ಏಡ್ಸ್ ಸಮೀಕ್ಷೆಗೆ 75 ಸಾವಿರ ಡಾಲರ್ ಹಣ ಖರ್ಚಾಗಿದೆ! ಜೂನ್ ತಿಂಗಳಲ್ಲಿ ಸಮೀಕ್ಷೆ ಪ್ರಾರಂಭಿಸಲಾಗಿತ್ತು. ಯುಎನ್‌ಎಏಡ್ಸ್, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- ಈ ಸಂಸ್ಥೆಗಳು ಸಂಗ್ರಹಿಸಿದ ಅಂಕಿ- ಅಂಶಗಳ ಆಧಾರದ ಮೇಲೆ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿದ್ದೇವೆ ಎಂದು ಜನಸಂಖ್ಯಾ ಮಾಹಿತಿ ಬ್ಯೂರೋದ ಡೆಮೋಗ್ರಾಫರ್ ಕಾರ್ಲ್ ಹಾಬ್ ಹೇಳಿದರು.
ಹಳ್ಳಿಗಳಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ಇನ್ನೂ ಚುರುಕಾಗಬೇಕಿದೆ ಎಂದು ಸಮೀಕ್ಷಾ ವರದಿ ಶಿಫಾರಸ್ಸು ಮಾಡಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳ ಹಳ್ಳಿಗಳಲ್ಲಿ 4 ಹೆಂಗಸರ ಪೈಕಿ ಮೂವರಿಗೆ ಏಡ್ಸ್ / ಎಚ್‌ಐವಿ ಹೆಸರೇ ಅಪರಿಚಿತ. 10 ಗಂಡಸರ ಪೈಕಿ ಮೂವರಿಗೆ ನಿರೋಧ್‌ನ ಉಪಯುಕ್ತತೆಯೇ ಗೊತ್ತಿಲ್ಲ. ಎಚ್‌ಐವಿ ಸೋಂಕಿರುವ ತಾಯಂದಿರಿಂದ ಮಕ್ಕಳಿಗೂ ರೋಗ ತಗಲುತ್ತದೆ ಎಂಬ ಸಾಮಾನ್ಯ ಜ್ಞಾನ ಈ ಹಳ್ಳಿಗಳ 50 ಪ್ರತಿಶತ ಹೆಂಗಸರಿಗೆ ಇಲ್ಲ.
ಏಡ್ಸ್ ಜಾಗೃತಿಗೆ ಈಗಾಗಲೇ ಕೋಟಿ ಕೋಟಿ ರುಪಾಯಿ ವ್ಯಯಿಸಲಾಗಿದೆ. ಆದರೆ ಈ ಹಣ ಎಲ್ಲಿ ಸೋರಿಹೋಗಿದೆಯೋ ಎಂಬುದೇ ಸದ್ಯದ ಅನುಮಾನ. ಯಾಕೆಂದರೆ, ಮದ್ದೇ ಇಲ್ಲದ ಈ ರೋಗದ ಬಗ್ಗೆ ಜಾಗೃತಿ ಆಂದೋಲನಗಳು ಶುರುವಾಗಿ ದಶಕವಾಗುತ್ತಾ ಬಂದಿದೆ. ಹಾಗಿದ್ದೂ ಏಡ್ಸ್ ರೋಗ ಬರದಂತೆ ನೋಡಿಕೊಳ್ಳುವಂತೆ ಜನರನ್ನು ಪ್ರೇರೇಪಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಸಮೀಕ್ಷೆಯ ಅಂಕಿ- ಅಂಶಗಳಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ , ಸಮೀಕ್ಷೆ ನಡೆಸಿರುವ ಅಧಿಕಾರಿಗಳ ಪ್ರಕಾರ- ಎಚ್‌ಐವಿ ಸೋಂಕು ಇದೇ ರೀತಿ ಹರಡಿದರೆ, ಯೂರೋಪ್ ದೇಶಗಳಂತೆ ಭಾರತ ಕೂಡ ಗಂಭೀರ ತೊಂದರೆ ಅನುಭವಿಸಬೇಕಾಗುತ್ತದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications