ಅಮೆರಿಕೆಯ ಐಟಿ ಗುರುಗಳ ಕೆಲಸ ಕಂಟಕ ಶಿಷ್ಯರು
ಅಮೆರಿಕೆಯ ಐಟಿ ಗುರುಗಳ ಕೆಲಸ ಕಂಟಕ ಶಿಷ್ಯರು
ಇವತ್ತು ಅಮೆರಿಕಾದ ಐಟಿ ಪರಿಣತರಿಗೆ ಅಂಡರ್ ಎಂಪ್ಲಾಯ್‌ಮೆಂಟ್ ಸಮಸ್ಯೆ ಕಾಡುತ್ತಿದೆ. ಎಲ್- 1 ವೀಸಾ ಮಹಿಮೆ ಭಾರತೀಯರ ಪಾಲಿಗೆ ವರದಾನ, ಅಮೆರಿಕನ್ನರಿಗೋ ಬ್ರೆಡ್ಡು ಕಳ್ಳ !
‘ವಾಷಿಂಗ್ಟನ್ ಟೈಮ್ಸ್’ ಪತ್ರಿಕೆ ಅಮೆರಿಕನ್ ಐಟಿ ಪರಿಣತರ ಹೆಚ್ಚುತ್ತಿರುವ ಸಮಸ್ಯೆಯನ್ನು ಉದಾಹರಣೆಗಳ ಸಹಿತ ಬಿಚ್ಚಿಟ್ಟಿದೆ. ಸ್ಕಾಟ್ ಕಿರ್ವಿನ್‌ಗೆ ಈಗ ವಯಸ್ಸು 36. ಅಮೆರಿಕಾಗೆ ಭಾರತದ ಮತ್ತಿತರ ದೇಶಗಳಿಂದ ಬರುವ ಐಟಿ ಸಿಬ್ಬಂದಿಗೆ ಪಾಠ ಹೇಳಿದ ಈತ, ಇನ್ವೆಸ್ಟ್‌ಮೆಂಟ್ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಕಂಪನಿ ಕೆಲಸದಿಂದ ಕಿತ್ತುಹಾಕಿತು. ಅದಾದ ನಂತರ 225 ಕಂಪನಿಗಳಿಗೆ ಒಮ್ಮೆಲೇ ತನ್ನ ಬಯೋಡೇಟಾ ಕಳಿಸಿ, ಕೆಲಸಕ್ಕೆ ಅರ್ಜಿ ಗುಜರಾಯಿಸಿದ. ಯಾವುದೋ ಒಂದು ಸಣ್ಣ ಬ್ಯಾಂಕಲ್ಲಿ ಟೆಂಪರರಿ ಕೆಲಸ ಸಿಕ್ಕಿತು. ಹಿಂದಿನ ಬ್ಯಾಂಕಿಗಿಂತ ಇಲ್ಲಿ 20 ಪ್ರತಿಶತ ಸಂಬಳ ಕಡಿಮೆ. ಕೆಲಸ ಮಾತ್ರ ಜಾಸ್ತಿ.
ಇದು ಎಲ್- 1 ವೀಸಾ ಮಹಿಮೆ ಅಂತ ಅಮೆರಿಕನ್ ಐಟಿ ಪರಿಣತರು ಅಲವತ್ತುಕೊಳ್ಳುತ್ತಿದ್ದಾರೆ. ಈ ವೀಸಾ ಪಡೆದ ವಿದೇಶೀ ಕಂಪನಿಗಳು 7 ವರ್ಷದವರೆಗೆ ತನ್ನ ಸಿಬ್ಬಂದಿಯನ್ನು ಅಮೆರಿಕಾಗೆ ಯಾವಾಗ ಬೇಕಾದರೂ ವರ್ಗಾವಣೆ ಮಾಡಬಹುದು.
ವಾಷಿಂಗ್ಟನ್ ಟೈಮ್ಸ್ ಇನ್ನೂ ಒಂದು ಉದಾಹರಣೆಯನ್ನು ಕೊಟ್ಟಿದೆ- ಕೆವಿನ್ ಶರ್ಮನ್ (47) ಎಂಬಾತ ವರ್ಷಕ್ಕೆ 62 ಸಾವಿರ ಡಾಲರ್ ಸಂಬಳ ಪಡೆದು ಗುತ್ತಿಗೆ ಆಧಾರದ ಮೇಲೆ ಭಾರತೀಯ ಕಂಪ್ಯೂಟರ್ ಎಂಜಿನಿಯರುಗಳಿಗೆ ಕಂಪ್ಯೂಟರ್ ಡೇಟಾಬೇಸ್ ನಿರ್ವಹಣೆಯ ಪಾಠವನ್ನು 1999- 2000ದಲ್ಲಿ ಮಾಡುತ್ತಿದ್ದ. ಇವತ್ತು ತನ್ನ ಶಿಷ್ಯರ ಪರ್ಸನಲ್ ಕಂಪ್ಯೂಟರ್‌ಗಳನ್ನು ರಿಪೇರಿ ಮಾಡುವ ಗುತ್ತಿಗೆಯನ್ನು ಪಡೆಯಲೂ ಈತ ಹೆಣಗಾಡಬೇಕಾಯಿತು. ಎರಡು ವರ್ಷ ಇವನಿಗೆ ಕೆಲಸವೇ ಇರಲಿಲ್ಲ. ಇವನ ಶಿಷ್ಯರಿಗೇ ಅಲ್ಲಿ ಮೊದಲ ಮಣೆ.
ಅಮೆರಿಕದ 2003ನೇ ವಿತ್ತ ವರ್ಷದ ಅಕ್ಟೋಬರ್- ಮಾರ್ಚ್ ಅವಧಿಯಲ್ಲಿ 28,098 ಎಲ್- 1 ವೀಸಾಗಳನ್ನು ಸರ್ಕಾರ ವಿತರಿಸಿದೆ. 2002ನೇ ಇಸವಿಗೆ ಹೋಲಿಸಿದರೆ ಈ ಪ್ರಮಾಣ ಶೇ.7ರಷ್ಟು ಹೆಚ್ಚು. ಕಳೆದ ತಿಂಗಳು ಕನೆಕ್ಟಿಕಟ್ ಡೆಮಕ್ರಾಟ್‌ನ ಪ್ರತಿನಿಧಿ ರೋಸಾ ಡಿಲಾರೋ ಹೊರಡಿಸಿದ ಮಸೂದೆಯ ಪ್ರಕಾರ ವರ್ಷಕ್ಕೆ 35 ಸಾವಿರ ಎಲ್- 1 ಕೆಲಸಗಾರರು ಅಮೆರಿಕಕ್ಕೆ ಬರಲು ಅವಕಾಶವಿದೆ. 7 ವರ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ, ಬಂದು ಹೋಗಬಹುದಾದ ಸವಲತ್ತು ವಿದೇಶೀ ಕಂಪನಿಗಳಿಗೆ ವರದಾನವಾಗಿದೆ.
ಐಬಿಎಂ, ಹ್ಯೂಲೆಟ್ ಪ್ಯಾಕಾರ್ಡ್, ಸಿಸ್ಕೋ ಸಿಸ್ಟಂಸ್, ಒರ್ಯಾಕಲ್, ಮೈಕ್ರೋಸಾಫ್ಟ್‌ನಂಥಾ ಕಂಪನಿಗಳು ಎಲ್- 1 ಕೆಲಸಗಾರರನ್ನು ಇಟ್ಟುಕೊಂಡಿವೆ. ಈ ನೌಕರರ ಸಂಖ್ಯೆ ಎಷ್ಟು ಅನ್ನೋದನ್ನು ಮಾತ್ರ ಗುಟ್ಟಾಗಿಟ್ಟಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಟೆಕ್ನಾಲಜೀಸ್ ಮತ್ತು ವಿಪ್ರೋ ಟೆಕ್ನಾಲಜೀಸ್‌ನಿಂದ ಈ ಕಂಪನಿಗಳಿಗೆ ಕಸುಬುದಾರರು ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಾರೆ.
ಇದರಿಂದ ಏನು ಲಾಭ ?
ಸಿಬ್ಬಂದಿಗೆ ಕೊಡುವ ಸಂಬಳದ ಉಳಿತಾಯ. ಅಮೆರಿಕದಲ್ಲೇ ಇರುವ ಕೆಲಸಗಾರರಿಗಿಂತ ಕಡಿಮೆ ಸಂಬಳಕ್ಕೆ ಎರವಲು ಸೇವೆ ಸಿಗುತ್ತಿದೆ. ಆದರೆ, ಇಂಟೆಲ್ ಇವೆಲ್ಲಾ ಸುಳ್ಳು ಅಂತ ವಾದಿಸುತ್ತಿದೆ. ಎಲ್- 1 ವೀಸಾ ಸಂಖ್ಯೆಗಳನ್ನು ನಿಯಂತ್ರಿಸಿದರೆ ಮಾತ್ರ ನಮಗೆ ಉಳಿಗಾಲ ಅಂತ ಅಮೆರಿಕೆಯ ಕಂಪ್ಯೂಟರ್ ಪರಿಣತರು ಗೋಳಿಡುತ್ತಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications