ಬೆಂಗಳೂರಲ್ಲಿ ದೈತ್ಯ ಪ್ರತಿಭೆಗಳ ‘ಸಿನಿ ಎಕ್ಸ್‌ಪೋ’
ಉಷಾ ಉತ್ತುಪ್ ನೈಟ್, ಸೋನು ನಿಗಂ ರಸಸಂಜೆ, ಹೇಮಾಮಾಲಿನಿ ಶಾಸ್ತ್ರೀಯ ನೃತ್ಯ, ಕನ್ನಡ ನಟ- ನಟಿಯರ ಝಲಕ್ಕು...ಇವೆಲ್ಲವನ್ನೂ ಒಂದೇ ಕಡೆ ಈ ಬೇಸಗೆಯಲ್ಲಿ ನೋಡುವಂತಾದರೆ?
ಅದನ್ನು ನಿಜ ಮಾಡಲೆಂದೇ ಕನ್ನಡ ಚಿತ್ರೋದ್ಯಮ ‘ಸಿನಿ ಎಕ್ಸ್‌ಪೋ- 2003’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಏಪ್ರಿಲ್ 18ರಿಂದ ಮೇ. 18ರ ತನಕ ನಿತ್ಯವೂ ಭರಪೂರ ಮನರಂಜನೆ. ಭಾರತದ ಹೆಸರಾಂತ ಸಾಂಸ್ಕೃತಿಕ ಪ್ರತಿಭೆಗಳ ರಸಸ್ವಾದವನ್ನು ಮೊಗೆದುಕೊಳ್ಳುವ ಅವಕಾಶ ಬೆಂಗಳೂರಿಗರದ್ದು. ಅರಮನೆ ಆವರಣ ಇದಕ್ಕಾಗೇ ಸಜ್ಜಾಗುತ್ತಿದೆ.
ಕರ್ನಾಟಕ ಫಿಲಂ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ರಮೇಶ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸಿನಿ ಎಕ್ಸ್‌ಪೋದ ವಿವರಗಳನ್ನು ಕೊಟ್ಟರು. ಫಿಲಂ ಛೇಂಬರಿನ ಹೊಸ ಕಟ್ಟಡ ಕಟ್ಟಲು 3 ಕೋಟಿ ರುಪಾಯಿಯಷ್ಟು ನಿಧಿ ಸಂಗ್ರಹಿಸಲು ಈ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ.
ಮಧ್ಯಮ ವರ್ಗದ ಜನರ ಕೈಗೆಟುಕುವಂತೆ ಟಿಕೇಟು ದರ ನಿಗದಿ ಪಡಿಸಲಾಗಿದ್ದು, ಸೀಜನ್ ಟಿಕೇಟಿಗೆ 1 ಸಾವಿರ ರುಪಾಯಿ ಬೆಲೆ ಇಡಲಾಗಿದೆ. ಟಿಕೀಟು ಹಂಚಿಕೆ ಕಾರ್ಯ ಇನ್ನೂ ಶುರುವಾಗಿಲ್ಲ. ಗ್ರಾಹಕ ಮೇಳದ ರೀತಿಯಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಗೃಹೋಪಯೋಗಿ ವಸ್ತುಗಳ ಮಳಿಗೆಗಳೂ ಇರುತ್ತವೆ. ಆಕಾಶ್, ಲಹರಿ ಮೊದಲಾದ ಕೆಸೆಟ್ ಕಂಪನಿಗಳ ಮಳಿಗೆಗಳಲ್ಲದೆ ರಾಮೋಜಿ ಫಿಲಂ ಸೊಸೈಟಿಯೂ ಕೂಡ ಮಳಿಗೆ ತೆರೆಯಲಿದೆ. ಮಕ್ಕಳ ಮನರಂಜಿಸಲು ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಸಿದ್ಧವಾಗುತ್ತಿದೆ ಎಂದು ರಮೇಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications