ಮಲ್ಯ ನಾಮಪತ್ರ ಕ್ರಮಬದ್ಧ : ರಾಜ್ಯಸಭೆ ಚುನಾವಣೆ ರಂಗೋರಂಗು
ಬೆಂಗಳೂರು : ಮಾರ್ಚ್ 27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಜನತಾ ಪರಿವಾರದ ಬೆಂಬಲಿತ ಅಭ್ಯರ್ಥಿ ವಿಜಯ್ ಮಲ್ಯ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧ ಎಂದು ಚುನಾವಣಾಧಿಕಾರಿ ಘೋಷಿಸುವುದರ ಮೂಲಕ ಚುನಾವಣೆ ರಂಗೇರಿದೆ.
ಮಲ್ಯ ಒಬ್ಬ ಎನ್‌ಆರ್‌ಐ. ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಬಿಜೆಪಿಯ ಡಿ.ಕೆ.ತಾರಾದೇವಿ ಅವರ ತಕರಾರು ಕುರಿತಂತೆ ಶನಿವಾರ ಮಧ್ಯಾಹ್ನ ಸುಮಾರು ಎರಡೂವರೆ ತಾಸು ವಿಚಾರಣೆ ನಡೆಯಿತು. ತಾರಾದೇವಿ ಅವರ ವಕೀಲರು ಹಾಗೂ ಮಲ್ಯ ಅವರ ವಾದವನ್ನು ಕೇಳಿದ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಯಾಕೂಬ್ ಷರೀಫ್ ತೀರ್ಪು ಮಲ್ಯ ಪರವಾಗಿ ಹೊರಬಿತ್ತು.
ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಮೂರು ಕಾಂಗ್ರೆಸ್ಸಿಗೆ ಮೀಸಲು. ಇನ್ನೊಂದು ಸ್ಥಾನಕ್ಕೆ ತಾರಾದೇವಿ ಹಾಗೂ ಮಲ್ಯ ನಡುವೆ ನೇರ ಸ್ಪರ್ಧೆ. ಪದ ಪಡೆಯಲು 45 ವೋಟುಗಳು ಬೇಕು. ತಾರಾದೇವಿಯವರಿಗೆ ತಮ್ಮ ಪಕ್ಷದ 40 ವೋಟುಗಳು ಗ್ಯಾರಂಟಿ ಎಂಬ ನಂಬಿಕೆ. ಬಿಜೆಪಿಯ 43 ಸದಸ್ಯರ ಪೈಕಿ ಇಬ್ಬರನ್ನು ಉಚ್ಚಾಟಿಸಲಾಗಿದೆ. ಕೋರ್ಟಿನ ಕೇಸೊಂದರಲ್ಲಿ ಸಿಲುಕಿರುವ ಮತ್ತೊಬ್ಬ ಅಭ್ಯರ್ಥಿ ವೋಟು ಮಾಡುವಂತಿಲ್ಲ. ಮಲ್ಯ ಪ್ರಕಾರ ಈಗಾಗಲೇ 25 ವೋಟುಗಳು ಅವರ ಬುಟ್ಟಿಗೆ. ಇನ್ನು 20 ವೋಟುಗಳ ಪಡೆಯುವುದು ನೀರು ಕುಡಿದಷ್ಟು ಸುಲಭ ಎನ್ನುತ್ತಾರವರು.
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಮಲ್ಯ ಅವರಿಗೆ ಕಾಂಗ್ರೆಸ್ ಕೃಪಾಕಟಾಕ್ಷ ಇರಲಿಲ್ಲ. ಸರ್ಕಾರದ ಬುಡಕ್ಕೇ ಪೆಟ್ಟು ಕೊಡುವ ಸಾಧ್ಯತೆ ಇದ್ದುದರಿಂದ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಈ ಧೋರಣೆ ತಳೆಯಬೇಕಿತ್ತು. ಆದರೆ ಈಗ ಕಾಂಗ್ರೆಸ್ಸಿನ ಸಾಫ್ಟ್ ಕಾರ್ನರ್ ನನಗಿದೆ. ಬಿಜೆಪಿಯಲ್ಲಿ ಆಂತರಿಕ ಒಡಕುಗಳಿರುವುದರಿಂದ, ಅಲ್ಲಿನ ಹತ್ತು ಹನ್ನೆರಡು ವೋಟುಗಳು ನನ್ನ ಪಾಲಿಗೆ. ಅಂದಮೇಲೆ ಗೆಲುವು ನನ್ನಿಂದ ದೂರವಿಲ್ಲ ಎಂದು ಆತ್ಮವಿಶ್ವಾಸದಿಂದ ಬೀಗುತ್ತಾರೆ ಮಲ್ಯ.
ಒಟ್ಟಿನಲ್ಲಿ ಮಲ್ಯ ನಾಮಪತ್ರ ಕ್ರಮಬದ್ಧವಾಗಿರುವುದು ಡಿ.ಕೆ.ತಾರಾದೇವಿ ಅವರ ನಿದ್ದೆಗೆಡಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications