ನೊಬೆಲ್ ಶಾಂತಿ ಪ್ರಶಸ್ತಿ ಅಖಾಡದಲ್ಲಿ ಬುಷ್-ಬ್ಲೇರ್ ರಣೋತ್ಸಾಹಿ ಜೋಡಿ
ಓಸ್ಲೊ : ಆಪ್ಘನ್ ಯುದ್ಧದ ರೂವಾರಿಗಳಾದ ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರ ಹೆಸರುಗಳನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಲಾಗಿದೆ ಎಂದು ಎನ್‌ಟಿಬಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ನಾರ್ವೆಯ ಟಾಮ್ ನೆಸ್‌ವಿಕ್ ನೊಬೆಲ್ ಶಾಂತಿ ಪ್ರಶಸ್ತಿ ಕಣದಲ್ಲಿರುವ ಮತ್ತೊಬ್ಬ ಪ್ರಬಲ ಸ್ಪರ್ಧಿ. ಫೆಬ್ರವರಿ 1 ರಂದು ಪ್ರಶಸ್ತಿಗೆ ಸ್ಪರ್ಧಿಗಳ ಹೆಸರನ್ನು ಸಲ್ಲಿಸಲಾಗಿದ್ದು , ಪ್ರತಿಷ್ಠಿತ ಪ್ರಶಸ್ತಿ ಈ ಬಾರಿ ಯಾರಿಗೆ ಎನ್ನುವ ಕುತೂಹಲ ಉಂಟಾಗಿದೆ. ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಹಾಗೂ ವಿಶ್ವಸಂಸ್ಥೆಗೆ ಸಂದಿತ್ತು .
ಸೆಪ್ಟಂಬರ್ 11 ರಂದು ಅಮೆರಿಕಾದ ಮೇಲೆ ನಡೆದ ಉಗ್ರರ ದಾಳಿಯ ನಂತರ ಅನೇಕ ಸ್ವೀಡಿಷ್ ಪ್ರಮುಖರು ನೊಬೆಲ್ ಶಾಂತಿ ಪ್ರಶಸ್ತಿಗೆ ಬುಷ್ ಅವರ ಹೆಸರನ್ನು ಸೂಚಿಸಿದ್ದರು. ಆದರೆ, ತಾಲಿಬಾನ್ ವಿರುದ್ಧ ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಿದರೆ ಮಾತ್ರ ಬುಷ್ ಅವರಿಗೆ ಪ್ರಶಸ್ತಿ ಎನ್ನುವುದವರ ಷರತ್ತು .
ಅಕ್ಟೋಬರ್ ಮಧ್ಯ ಭಾಗದ ವೇಳೆಗೆ ಪ್ರಶಸ್ತಿ ವಿಜೇತರ ಹೆಸರು ಪ್ರಕಟವಾಗಲಿದೆ. ವಿಜೇತರು ಬಂಗಾರದ ಪದಕ, ಡಿಪ್ಲೊಮ ಹಾಗೂ 10 ಮಿಲಿಯನ್ ಸ್ವೀಡಿಷ್ ಕ್ರೋನರ್ ನಗದನ್ನು ಪಡೆಯಲಿದ್ದಾರೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications