ಹೊತ್ತಿ ಉರಿದ 2001

ನವದೆಹಲಿ : ಸಂಸತ್‌ ಭವನದ ಮೇಲೆ ಉಗ್ರರ ದಾಳಿ, ಭಯೋತ್ಪಾದನೆ ನಿಗ್ರಹ ಸುಗ್ರೀವಾಜ್ಞೆ (ಪೊಟೊ)ಗೆ ರಾಜಕೀಯ ಪಕ್ಷಗಳಲ್ಲಿ ಮೂಡದ ಒಮ್ಮತ, 25 ಉಗ್ರಗಾಮಿ ಸಂಘಟನೆಗಳಿಗೆ ನಿಷೇಧ, ಮಣಿಪುರದಲ್ಲಿ ಮುಂದುವರಿದ ನಾಗಾ ಉಗ್ರರ ಅಟ್ಟಹಾಸ, ಜಮ್ಮು ಮತ್ತು ಕಾಶ್ಮೀರ ಕೊಳ್ಳದಲ್ಲಿ ಮಾಸದ ನೆತ್ತರ ಘಾಟು, ಆಂಧ್ರ ಪ್ರದೇಶದಲ್ಲಿ ನಕ್ಸಲೈಟ್‌ರ ಹಾವಳಿ, ಬಿಹಾರದಲ್ಲಿ ಅರಾಜಕತೆ, ಮಧ್ಯಪ್ರದೇಶ-ಮಹಾರಾಷ್ಟ್ರ-ಒರಿಸ್ಸಾ ಹಾಗೂ ಛತ್ತೀಸಗಢಕ್ಕೂ ವ್ಯಾಪಿಸಿದ ಉಗ್ರರ ನಂಟು, ಪಾಕಿಸ್ತಾನದ ಐಎಸ್‌ಐ ಷಡ್ಯಂತ್ರಗಳ ಬಯಲು...

- ಇವಿಷ್ಟೂ 2001 ನೇ ಇಸವಿಯಲ್ಲಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಕನ್ನಡಿಯಲ್ಲಿ ಕಾಣುವ ಅವ್ಯವಸ್ಥೆಯ ಅಹಿತಕರ ಪ್ರತಿಬಿಂಬ .

ನೆಮ್ಮದಿಯ ಸಂಗತಿಯೆಂದರೆ- ಈ ಅವಧಿಯಲ್ಲಿ ಕೇಂದ್ರದಲ್ಲಿನ ಸರ್ಕಾರಕ್ಕೆ ಯಾವುದೇ ರಾಜಕೀಯ ಗಂಡಾಂತರ ಉಂಟಾಗಿಲ್ಲ. ಸರ್ಕಾರ ಭದ್ರವಾಗಿದೆ. ಡಿಸೆಂಬರ್‌ 13 ರಂದು ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿಯನ್ನು , ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆಯೆಂದು ಎಲ್ಲ ರಾಜಕೀಯ ನಾಯಕರೂ ಖಂಡಿಸಿದರು. ಉಗ್ರರ ವಿರುದ್ಧ ಇಡೀ ದೇಶವೇ ಒಂದಾಗಿ ಪ್ರತಿಭಟನೆ ಸಲ್ಲಿಸಿತೆಂಬುದು ಗಮನಾರ್ಹ. ಅಂದರೆ- ದೇಶದ ಹಿತಾಸಕ್ತಿಗೆ ಗಂಡಾಂತರ ಒದಗಿದ ಸಂದರ್ಭದಲ್ಲಿ ರಾಜಕೀಯ ಶಕ್ತಿ ಕೇಂದ್ರೀಕೃತವಾಗುತ್ತದೆ ಎನ್ನುವ ಸಂಪ್ರದಾಯ ಇನ್ನೊಮ್ಮೆ ನಿಜವಾಗಿದೆ.

ಐಎಸ್‌ಐ, ಉಗ್ರಗಾಮಿ ಸಂಘಟನೆಗಳು ಹಾಗೂ ಪೊಟೊ

ಸಂಸತ್‌ ಭವನದ ಮೇಲೆ ನಡೆದ ದಾಳಿಗೆ ಪಾಕಿಸ್ತಾನದ ಐಎಸ್‌ಐ ಕೃಪಾ ಪೋಷಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್‌-ಇ- ತೊಯಿಬಾ ಹಾಗೂ ಜೈಷ್‌-ಇ-ಮೊಹಮ್ಮದ್‌ಗಳೇ ಕಾರಣವೆಂದು ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಲೋಕಸಭೆಯಲ್ಲಿ ಪ್ರಕಟಿಸಿದರು. ಈ ಸಂಘಟನೆಗಳ ವಿರುದ್ಧ ಪಾಕಿಸ್ತಾನ ತಟಸ್ಥ ನೀತಿ ಅನುಸರಿಸಿದ್ದನ್ನು ವಿರೋಧಿಸಿ, ಇಸ್ಲಮಾಬಾದ್‌ನಿಂದ ತನ್ನ ರಾಯಭಾರಿಯನ್ನು ವಾಪಸ್ಸು ಕರೆಸಿಕೊಳ್ಳಲು ಹಾಗೂ ಜನವರಿ 1 ರಿಂದ ಪಾಕಿಸ್ತಾನದೊಂದಿಗಿನ ರೈಲು- ಬಸ್ಸು ಸಂಚಾರವನ್ನು ರದ್ದು ಪಡಿಸಲು ಕೂಡ ಭಾರತ ನಿರ್ಧರಿಸಿತು.

ಅಕ್ಟೋಬರ್‌ 24 ರಂದು ಹೊರಡಿಸಿದ ಭಯೋತ್ಪಾದನೆ ನಿಗ್ರಹ ಸುಗ್ರೀವಾಜ್ಞೆ (ಪೊಟೊ) ಮೊದಲ ದಿನದಿಂದಲೇ ವಿರೋಧ ಪಕ್ಷಗಳ ಕೆಂಗಣ್ಣಿಗೆ ತುತ್ತಾಯಿತು. ಲೋಕಸಭೆಯಲ್ಲಿ ಪೊಟೊ ಮಂಡನೆಗೆ ವಿರೋಧ ಪಕ್ಷಗಳು ಪ್ರಬಲ ಪ್ರತಿರೋಧ ತೋರಿದ್ದರಿಂದ, ಪೊಟೊ ಲೋಕಸಭೆಯ ಮುಂದೆ ಬರುವುದೇ ಇನ್ನೂ ಸಾಧ್ಯವಾಗಿಲ್ಲ .

ಬಾಂಗ್ಲಾ ಹಳ್ಳಿಗರಿಂದ ಬಿಎಸ್‌ಎಫ್‌ ಯೋಧರ ಹತ್ಯೆ

ಇದೇ ವರ್ಷ(2001) ಏಪ್ರಿಲ್‌ ತಿಂಗಳಲ್ಲಿ ಭಾರತದ 16 ಮಂದಿ ಗಡಿ ಭದ್ರತಾ ಪಡೆಯ ಯೋಧರು ಬಾಂಗ್ಲಾ ದೇಶದ ಗಡಿಭಾಗದ ಹಳ್ಳಿಗರು ಹಾಗೂ ಬಿಡಿಆರ್‌ ವ್ಯಕ್ತಿಗಳಿಂದ ಬರ್ಬರ ಹತ್ಯೆಗೀಡಾದರು. ಆದರೆ ಉಭಯ ದೇಶಗಳ ಸಕಾಲಿಕ ರಾಜತಾಂತ್ರಿಕ ಪ್ರಯತ್ನಗಳಿಂದ ತಲೆದೋರಬಹುದಾಗಿದ್ದ ಸಮಸ್ಯೆ ತಣ್ಣಗಾಯಿತು.

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ 23 ಸಂಘಟನೆಗಳನ್ನು ಕೇಂದ್ರ ಸರ್ಕಾರ 2001 ನೇ ಇಸವಿಯಲ್ಲಿ ನಿಷೇಧಿಸಿತು. ಇದರಲ್ಲಿ ಕೆಲವು ವಿದ್ಯಾರ್ಥಿ ಸಂಘಟನೆಗಳಿರುವುದು ವಿಶೇಷ. ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಇಂಡಿಯಾ, ಹಿಜ್ಬುಲ್‌ ಮುಜಾಹಿದೀನ್‌, ಮಾವೊಯಿಸ್ಟ್‌ ಕಮ್ಯುನಿಸ್ಟ್‌ ಸೆಂಟರ್‌, ಪೀಪಲ್ಸ್‌ ವಾರ್‌ ಗ್ರೂಪ್‌, ನಿಷೇಧಕ್ಕೊಳಗಾದ ಪ್ರಮುಖ ಭಯೋತ್ಪಾದಕ ಸಂಘಟನೆಗಳು.

ಇದೇ ವರ್ಷ ಪೊಲೀಸರು ಹಾಗೂ ರಕ್ಷಣಾ ಏಜೆನ್ಸಿಗಳು ವಿವಿಧ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಐಎಸ್‌ಐ ಏಜೆಂಟರನ್ನು ಬಂಧಿಸಿದವು. ಬಂಧನಕ್ಕೊಳಗಾದವರಲ್ಲಿ ಪಾಕಿಸ್ತಾನಿ ನಾಗರಿಕರು ಇದ್ದಾರೆನ್ನುವುದು ಗಮನಾರ್ಹ. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಐಎಸ್‌ಐ ವ್ಯಾಪಕವಾಗಿ ಬೇರು ಬಿಟ್ಟಿರುವುದು ಹಾಗೂ ದೇಶದೊಳಗೆ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಹೊಸಿತಿಲಲ್ಲಿ ಯುದ್ಧ , ನೀವು ಸನ್ನದ್ಧರೇ..

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾಗುವುದೇ? ಸಂಸತ್‌ ಭವನದಂಥ ಪ್ರಜಾಪ್ರಭುತ್ವದ ಪ್ರತೀಕಕ್ಕೇ ದಾಳಿ ನಡೆದಿರುವಾಗ ಉಗ್ರರ ಹುಟ್ಟಡಗಿಸದೇ ಬಿಡಕೂಡದು ಎ್ನನುವ ಅಭಿಪ್ರಾಯಗಳು ಸಾರ್ವತ್ರಿಕವಾಗುತ್ತಿವೆ. ಎಲ್ಲ ಸಾಧ್ಯತೆಗಳನ್ನೂ ಮುಕ್ತವಾಗಿ ಪರಿಶೀಲಿಸಲಾಗುವುದು ಎನ್ನುತ್ತದೆ ಕೇಂದ್ರ ಸರ್ಕಾರ. ಭಯೋತ್ಪಾದಕತೆಯನ್ನು ಹತ್ತಿಕ್ಕುವಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೂ ಬೆಂಬಲ ಘೋಷಿಸಿದ್ದಾರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ. ಅಂದರೆ, ಯುದ್ಧ ಅನಿವಾರ್ಯವೇ?

ಸಿಂಧ್‌, ಕೇಂದ್ರ ಪಂಜಾಬ್‌ ಸೇರಿದಂತೆ ಅಂತರರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮೆಯಾಗಿವೆ. ಯುದ್ಧ ನಡೆಯುತ್ತದೆಂದು ಯಾರೂ ಹೇಳಿಲ್ಲ . ಆದರೆ, ಆಪ್ಘನ್‌ ಮೇಲೆ ಅಮೆರಿಕಾ ದಾಳಿ ಮಾಡಿದಂತೆ ಪಾಕ್‌ ಮೇಲೆ ಭಾರತ ಆಕ್ರಮಣ ಮಾಡಬೇಕು ಎನ್ನುವ ಇಂಗಿತವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಮುರಳಿ ಮನೋಹರ ಜೋಷಿ ವ್ಯಕ್ತಪಡಿಸಿದ್ದಾರೆ. ಮುಂದೆ ಏನಾಗುತ್ತದೆ.. 2002 ನೇ ಇಸವಿ ಏನೆಲ್ಲಕ್ಕೆ ಸಾಕ್ಷ್ಯವಾಗಲಿದೆ!

(ಪಿಟಿಐ /ಇನ್ಫೋ ವಾರ್ತೆ)

ಮುಖಪುಟ / ಲೋಕೋಭಿನ್ನರುಚಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+