ಕೊಳಿಕೋಡ್ ಬಳಿ ಮಂಗಳೂರು ಟ್ಯಾಂಕರ್- ಲಾರಿ ಅಪಘಾತ : 2 ಸಾವು
ಕೊಳಿಕೋಡ್ (ಕೇರಳ) : ಮಂಗಳೂರಿನಿಂದ ಕೇರಳಕ್ಕೆ ಬರುತ್ತಿದ್ದ ಅಮೋನಿಯಾ ಅನಿಲ ತುಂಬಿದ್ದ ಟ್ಯಾಂಕರ್ ಲಾರಿ ಗುರುವಾರ ಮೊದಲ ಜಾವ 1 ಗಂಟೆ ಸುಮಾರಿನಲ್ಲಿ ಎರಿಂಜಿಪಳಂ ಬಳಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸತ್ತಿದ್ದು, ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಟ್ಯಾಂಕರ್ ಲಾರಿಯಿಂದ ಭಾರೀ ಪ್ರಮಾಣದಲ್ಲಿ ಅನಿಲ ಸೋರಿದ್ದು, ಸಮೀಪದಲ್ಲಿ ವಾಸವಿರುವ ಜನ ಗುಳೇ ಹೊರಟಿದ್ದಾರೆ.
ಅಪಘಾತ ಸಂಭವಿಸಿದ ಜಾಗೆಯಿಂದ ಸುಮಾರು 100 ಮೀಟರ್ ವ್ಯಾಪ್ತಿಯವರೆಗೆ ಅನಿಲದ ತೀವ್ರತೆ ಹೆಚ್ಚಾಗಿದೆ. ಈ ಸ್ಥಳಗಲ್ಲಿ ವಾಸಿಸುತ್ತಿರುವವರ ಕಣ್ಣುಗಳು ಉರಿಯ ತೊಡಗಿವೆ. ಅಪಘಾತದಿಂದಾಗಿ ಹತ್ತಿರದ ಜನ 1 ಗಂಟೆಯ ರಾತ್ರಿಯಲ್ಲೂ ಸುರಕ್ಷಿತ ಸ್ಥಳಗಳಿಗೆ ಗುಳೇ ಹೊರಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರನ್ನು ಒಬ್ಬ ಚಾಲಕ, ಮತ್ತೊಬ್ಬ ಕ್ಲೀನರ್ ಎಂದು ಗುರ್ತಿಸಲಾಗಿದೆ. ಇವರು ಯಾವ ಲಾರಿಯಲ್ಲಿದ್ದವರು ಎಂಬುದು ತಿಳಿದಿಲ್ಲ. ಗಾಯಗೊಂಡಿದ್ದ ಮೂವರನ್ನು ಸರ್ಕಾರಿ ಬೀಚ್ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ಯಾಂಕರ್‌ನಲ್ಲಿ ಸಾವಿರಾರು ಲೀಟರ್ ಅಮೋನಿಯಾ ಅನಿಲ ಇದ್ದುದರಿಂದ ಅಪಘಾತದಿಂದ ಸುತ್ತಮುತ್ತಲ ಪರಿಸರದಲ್ಲಿ ಕಿರಿಕಿರಿ ಹುಟ್ಟಿಸುವಂಥ ವಾಸನೆ ಹೊಮ್ಮುತ್ತಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಅನಿಲ ಸೋರಿಕೆಯ ಪ್ರಮಾಣವನ್ನು ನಿಯಂತ್ರಿಸಲು ಶತಾಯಗತಾಯ ಯತ್ನಿಸುತ್ತಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications