ವಿಜ್ಞಾನ ಕೇಂದ್ರದಿಂದ ಗುಲ್ಬರ್ಗದಲ್ಲಿ 4 ದಿನಗಳ ಕಂಪ್ಯೂಟರ್ ಮೇಳ
ಗುಲ್ಬರ್ಗಾ : ಕಂಪ್ಯೂಟರ್ ಈ ಹೊತ್ತು ದಿಲ್ಲಿಯಿಂದ ಹಳ್ಳಿಯವರೆಗೂ ಹಬ್ಬಿದೆ. ಗ್ರಾಮೀಣ ಜನತೆಗೂ ಕಂಪ್ಯೂಟರ್ ಮಹತ್ವದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರ ನಾಲ್ಕು ದಿನಗಳ ಕಂಪ್ಯೂಟರ್ ಮೇಳ ಆಯೋಜಿಸಿದೆ.
ಡಿ.19ರ ಬುಧವಾರ ಉದ್ಘಾಟನೆಗೊಂಡ ಈ ಮೇಳ ಡಿ. 22ರವರೆಗೆ ನಡೆಯಲಿದೆ. ಈ ಕಂಪ್ಯೂಟರ್ ಮೇಳದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್ ತಯಾರಿಕಾ ಸ್ಪರ್ಧೆ ಮತ್ತು ಕಂಪ್ಯೂಟರ್ ಬಗ್ಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಪ್ರತಿ ಶಾಲೆ ಅಥವಾ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಇದಲ್ಲದೆ ಮೇಳದ ಅಂಗವಾಗಿ ಶುಕ್ರವಾರ (ಡಿ.21) ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಂಪ್ಯೂಟರ್ ವಿಷಯದ ಬಗ್ಗೆ ಚಿತ್ರ ರಚನೆ ಸ್ಪರ್ಧೆಯೂ ಮೇಳದ ಒಂದು ಆಕರ್ಷಣೆಯಾಗಿದೆ. ಶನಿವಾರ ಸಂಜೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಗುವುದು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಎಷ್ಟು ಅನಿವಾರ್ಯ ಹಾಗೂ ಅದು ಎಷ್ಟು ಉಪಯುಕ್ತ ಎಂಬುದನ್ನು ತಿಳಿಯಪಡಿಸಲು ಹಾಗೂ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವ ಸಲುವಾಗಿ ಈ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಾಜೂ ಭಾಸ್ಕರನ್ ಹಾಗೂ ಶಿಕ್ಷಣ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications