ಏಷ್ಯಾಖಂಡದ ಸಾರ್ವಭೌಮತ್ವ ಸ್ಥಾಪನೆಯತ್ತ ವಿಪ್ರೋ ಹೆಜ್ಜೆ
ಬೆಂಗಳೂರು : ಏಷ್ಯಾ ಖಂಡದಲ್ಲಿ ಸಿಂಗಪೂರ್ ಅನ್ನು ತನ್ನ ಪ್ರಾದೇಶಿಕ ಅಡ್ಡ ಮಾಡಿಕೊಳ್ಳುವ ಬಗ್ಗೆ ವಿಪ್ರೋ ಇನ್‌ಫೋಟೆಕ್ ದೃಷ್ಟಿ ಹರಿಸಿದೆ. ಈ ವಿಷಯವನ್ನು ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಮ್ ಪ್ರೇಮ್‌ಜೀ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಷ್ಯಾ ಫೆಸಿಫಿಕ್ ಪ್ರವಾಸದ ಅಂಗವಾಗಿ ಕಳೆದ ವಾರ ಸಿಂಗಪೂರ್‌ಗೆ ಭೇಟಿ ನೀಡಿದ್ದ ಪ್ರೇಮ್‌ಜೀ ಅವರು ತಮ್ಮ ಈ ಇಂಗಿತವನ್ನು ಸಿಂಗಪೂರ್‌ನ ಪ್ರಧಾನಮಂತ್ರಿ ಗೋ ಚೂಕ್ ಟಂಗ್ ಅವರಿಗೂ ತಿಳಿಸಿದ್ದಾರೆ ಎಂದು ವಿಪ್ರೋದ ಅಧಿಕೃತ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಸಿಂಗಪೂರ ಮತ್ತು ಅದರ ನೆರೆಹೊರೆಯ ಪ್ರಾಂತ್ಯಗಳಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಸಿಂಗಪೂರ್ ಸರಕಾರದೊಂದಿಗಿನ ಪಾಲುದಾರಿಕೆ ಬಗ್ಗೆ ವಿಪ್ರೋ ಉತ್ಸುಕವಾಗಿದೆ. ಗೋ ಮತ್ತು ಪ್ರೇಮ್‌ಜೀ ಅವರು ಏಷ್ಯಾಖಂಡದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಹಾಗೂ ಸಿಂಗಪೂರ್ ಜೊತೆಯಾಗಿ ಈ ಪ್ರಾಂತ್ಯದಲ್ಲಿ ಐ.ಟಿ. ಕ್ಷೇತ್ರ ಬಲಪಡಿಸುವ ಬಗ್ಗೆ ಕೂಡ ಕಾರ್ಯಸೂಚಿಗಳನ್ನು ಪರಿಶೀಲಿಸಲಾಗಿದೆ.
ಆಹ್ವಾನ : ಮುಂದಿನ ಭಾರತ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ತಮ್ಮ ವಿಫೋ ಸಂಸ್ಥೆಗೆ ಭೇಟಿ ನೀಡುವಂತೆ ಕೂಡ ಸಿಂಗಪೂರ್ ಪ್ರಧಾನಿ ಅವರಿಗೆ ಪ್ರೇಮ್‌ಜೀ ಆಹ್ವಾನ ನೀಡಿದ್ದಾರೆ ಎಂದು ಪ್ರಕಟಣೆ ಹೇಳಿದೆ. ಪ್ರೇಮ್‌ಜೀ ಅವರು ಮತ್ತು ಸಿಂಗಪೂರ್ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ.
ಜಾಗತಿಕ ವಿಸ್ತರಣೆ ಕಾರ್ಯತಂತ್ರದ ಅಡಿಯಲ್ಲಿ, ವಿಪ್ರೋ ಇನ್‌ಫೋಟೆಕ್ ಈ ವರ್ಷದ ಆದಿಯಲ್ಲಿ ಏಷ್ಯಾ ಖಂಡದ ಕಾರ್ಯಾಚರಣೆಯನ್ನು ಸಿಂಗಪೂರ್‌ನಲ್ಲಿ ಆರಂಭಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
(ಪಿ.ಟಿ.ಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications