ಚಳಿಯೆಂದು ಒಳಗಿದ್ದೀರಾ? ಅಂಗಳದಲ್ಲಿ ತಾರೆಗಳು ಚೆಲ್ಲಿವೆ ಕಂಡಿರಾ..
ಆಕಾಶ ಹತ್ತಿರ ಬಂದಿದೆ. ರಾಶಿ ಚುಕ್ಕಿಗಳು ಇನ್ನೇನು ಕಣ್ಮುಂದಿನ ಬೆಟ್ಟಂದಚಿನವರೆಗೆ ನಡೆದರಾಯ್ತು. ಕೈಗೇ ಸಿಗುತ್ತದೆ ಎನ್ನುವಷ್ಟು ಹತ್ತಿರ. ಹಾಗೇ ಚಳಿ. ಎದೆ ಗೂಡನ್ನೇ ಕಚ್ಚಿಕೊಳ್ಳುವ, ಪೆನ್ನು ಹಿಡಿಯಲಾಗದಷ್ಟು ಕೊರೆಯುವ ಮಹಾ ಮೊಂಡ ಚಳಿ ಬಂದಿದೆ.
ಬೆಳಗೆಂದರೆ ಸೊಬಗು. ಆದರೆ ಡಿಸೆಂಬರ್ ಚಳಿಯ ಬೆಳಗಿನಲ್ಲಿ ಚಾದರ ಹೊದ್ದುಕೊಂಡು ಮಲಗುವ ಅವಕಾಶವಿದ್ದರೆ ಮಾತ್ರ ಮನಕ್ಕೆ ಮುದ. ಆಫೀಸು, ಬಸ್ಸು, ಗಾಡಿ ಸಹವಾಸ ಯಾರಿಗೆ ಬೇಕಪ್ಪಾ ...
ಚಳಿ ಬೆಂಗಳೂರನ್ನು ಕೊರೆಯುತ್ತಿದೆ. ಹಿರಿಯರ ಪ್ರಕಾರ ಚಳಿಗಾಲದಲ್ಲಿ ಎಷ್ಟು ಕಠಿಣವಾಗಿ ಚಳಿಯಾಗುತ್ತದೋ, ಮಳೆಗಾಲದಲ್ಲಿ ಹಾಗೇ ಚೆಂದಾಗಿ ಮಳೆ ಸುರಿಯುತ್ತದೆ. ರಾಜ್ಯ ಈ ವರ್ಷ ಅನುಭವಿಸಿದ ದುರ್ಭಿಕ್ಷ ನೋಡಿದರೆ ಸದ್ಯ ಹಿರಿಯರ ಹೇಳಿದ ಹಾಗಾದರೆ ಸಾಕು ಅನಿಸುತ್ತದೆ. ಚಳಿಯಾದರೆ ಸ್ವೆಟರುಂಟು. ಮಳೆ ಬರದಿರೆ ಏನುಂಟು ಹೇಳಿ.
ನಗರದಲ್ಲಿ ಇವತ್ತಿನ ಕನಿಷ್ಠ ಉಷ್ಣಾಂಶ 12 ಡಿಗ್ರಿ. 1997ನೇ ಇಸವಿಯಿಂದ ಪ್ರತಿ ಡಿಸೆಂಬರಿನಲ್ಲೂ ಉಷ್ಣಾಂಶ ಕಡಿಮೆಯಾಗುತ್ತಲೇ ಬರುತ್ತಿದೆ. ಹಾಗಂತ ಹವಾಮಾನ ಇಲಾಖೆ ಹೇಳುತ್ತದೆ. ಮಂಜಿನ ಮುಂಜಾನೆ. ನಲ್ಲಿಯಲ್ಲಿಳಿಯುವ ನೀರಿಗೆ ಪೇಸ್ಟು ಹಚ್ಚಿದ ಬ್ರಷ್ಷು ಮತ್ತೆ ಕೈಬೆರಳು ಒಡ್ಡಿದರೆ ಬೆರಳ ಸಂದು ನೋಯುವ ಚಳಿ. ರಂಜಾನ್ ತಿಂಗಳ ಅಪರಾತ್ರಿಯ ತುಸು ಹೊತ್ತಿನ ನಂತರ ಮಸೀದಿಯಲ್ಲಿ ಕೂಗುವ ಬಾಂಕ್ ದನಿಯಲ್ಲೂ ನಡುಕ.
ಮತ್ತೆ ನೀವು ಇತ್ತೀಚೆಗೇನಾದರೂ ಆಕಾಶ ನೋಡಿದ್ದೀರಾ... ವಿಶೇಷವೇನಿಲ್ಲ. ಅದೇ ಮಾಮೂಲಿ ತಾರೆಗಳು. ಅವುಗಳನ್ನು ನೋಡುತ್ತಲೇ ನೀವೆಂದಾದರೂ ಕಳೆದು ಹೋಗಿದ್ದೀರಾ... ಹೋಗುತ್ತೀರಾ ? ಬೆಂಗಳೂರಿನಲ್ಲಾದರೆ ತಿಳಿ ಕೆಂಪನೆಯ ಆಕಾಶದಲ್ಲಿ ತಾರೆಯರ ಆರಿಸುವುದು ಬಲುಕಷ್ಟ. ಆದರೂ ಇವತ್ತು ಅಮಾವಾಸ್ಯೆ. ಹಾಲುಗಡಲ ಸೀಮೆಗೆ ಚಂದಿರನ ಒಡೆತನವಿಲ್ಲ. ಚುಕ್ಕಿಗಳ ಚಿಕ್ಕಿ ಬೆಳಕ ದರಬಾರು. ತೇರಿಲ್ಲದ ಜಾತ್ರೆ. ದುರ್ಬೀನಿದ್ದರೆ ಇನ್ನಷ್ಟು ಮಜಾ. ಇಲ್ಲವೆಂದರೂ ಪರವಾಗಿಲ್ಲ. ಆಗಸದ ಬೆರಗು ನೋಡಲು ಮಾತ್ರ ಮರೆಯಬೇಡಿ.
ನಿಮಗೆ ಅತೀ ಹತ್ತಿರದಿಂದ ಆಕಾಶವನ್ನು ನೋಡಬೇಕಂದ್ರೆ ಡಿಸೆಂಬರ್ 22ರವರೆಗೆ ಕಾಯಬೇಕು. ಉತ್ತರಾಯಣಾರಂಭದ ದಿನ. ಆಮೇಲೆ ಮತ್ತೆ ಆಗಸ ನಿಮ್ಮಿಂದ ದೂರಾಗುತ್ತಾ ಹೋಗುತ್ತದೆ. ನಾಳೆ ಮತ್ತೆ ಗೀರು ಚಂದ್ರ ಬರುತ್ತಾನೆ. ನಿಮ್ಮಂಗಳದಲ್ಲಿ, ಟೇರೇಸಿನಲ್ಲಿ ತಾರೆಗಳ ಆಯ್ದುಕೊಳ್ಳಿ. ಜೊತೆಗೆ ಚಳಿಯಿರಲಿ. ಬಿಯರು, ವಿಸ್ಕಿಯ ಗಿಲಗಿಲ ಸದ್ದು ಮರೆತು ನಿಮ್ಮ ಮನೆಯ ಆಕಾಶ ನೋಡುತ್ತೀರಾ...?
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications