ಕೊಡಗಿನಲ್ಲಿ ಇನ್ನೆರಡು ಪೂಜಾ ಸ್ಥಳಗಳ ಮೇಲೆ ದಾಳಿ, ಬಿಗು ಪರಿಸ್ಥಿತಿ
ಮಡಿಕೇರಿ: ಪೂಜಾ ಸ್ಥಳ ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರಂಭವಾದ ಗಲಭೆ ಮೂರನೇ ದಿನವೂ ಮುಂದುವರೆದಿದ್ದು ಮಂಗಳವಾರ ಮತ್ತೆರಡು ಪೂಜಾ ಮಂದಿರಗಳು ಪುಡಿಯಾಗಿವೆ.
ಕುಟ್ಟ ಎಂಬಲ್ಲಿ ಪೂಜಾ ಸ್ಥಳಕ್ಕೆ ದಾಳಿ ಮಾಡಿದ ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಹೂಡಕೇರಿ ಮತ್ತು ಬಲಮುರಿ ಪ್ರದೇಶಗಳಲ್ಲಿ ಎರಡು ಪ್ರಾರ್ಥನಾ ಮಂದಿರಗಳನ್ನು ಉದ್ರಿಕ್ತರು ನೆಲ ಸಮ ಮಾಡಿದ್ದು, ಇನ್ನೊಂದು ಪ್ರಾರ್ಥನಾ ಮಂದಿರಕ್ಕೆ ಭಾಗಶಃ ಹಾನಿಯಾಗಿದೆ.
ಮಂಗಳವಾರ, ಜಿಲ್ಲೆಯ ಎಲ್ಲ ದೇವಸ್ಥಾನಗಳ ಮುಖ್ಯಸ್ಥರು ಮತ್ತು ಹಿಂದುಸಂಘಟನೆಗಳ ಮುಖಂಡರು ಸಭೆ ಸೇರಿ ಪೂಜಾಸ್ಥಳಕ್ಕೆ ಹಾನಿ ಮಾಡಿರುವವರನ್ನು ತಕ್ಷಣವೇ ಬಂಧಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು. ಪೂಜಾ ಸ್ಥಳದ ದುರಸ್ತಿ, ಒತ್ತುವರಿ ತೆರವು, ಒಂದು ನಿರ್ದಿಷ್ಟ ಕೋಮಿನ ಜನರನ್ನು ಒಕ್ಕಲೆಬ್ಬಿಸುವುದು ಸೇರಿದಂತೆ ಇನ್ನಷ್ಟು ಬೇಡಿಕೆಗಳನ್ನು ಮುಂದಿಟ್ಟು ಡಿಸೆಂಬರ್ 15ರಂದು ಕೊಡಗು ಬಂದ್ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಜಾರಿಯಾಗಿದ್ದ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಾಗಿದ್ದು, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಡಿಸೆಂಬರ್ 13ರವರೆಗೆ ರಜೆ ವಿಸ್ತರಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications