ಮೈಸೂರಿನಲ್ಲಿ ಸಂಭ್ರಮದ ಕೊಡಗು ಜಿಲ್ಲಾ ಸಾಂಸ್ಕೃತಿಕ ಉತ್ಸವ
ಬೆಂಗಳೂರು : ಸಂಸ್ಕೃತಿಗೆ ಕರ್ನಾಟ, ಕೊಡವ, ತುಳು ಎಂಬ ಬೇರೆ ಬೇರೆ ಅರ್ಥಗಳೇನಿಲ್ಲ ಎಲ್ಲವೂ ಭಾರತೀಯ ಸಂಸ್ಕೃತಿಯನ್ನು ತಮ್ಮದೇ ಅದ ರೀತಿಯಲ್ಲಿ ಬಿಂಬಿಸುತ್ತವೆ ಅಷ್ಟೇ ಎಂದು ರಾಜ್ಯದ ಅಬಕಾರಿ ಸಚಿವ ಎಂ.ಎಂ. ನಾಣಯ್ಯ ಹೇಳಿದರು.
ಭಾನುವಾರ ರಾತ್ರಿ ಮೈಸೂರು ದಸರಾ ವಸ್ತು ಪ್ರದರ್ಶನ ಬಯಲು ರಂಗಮಂದಿರದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಏರ್ಪಡಿಸಿದ್ದ, ಕೊಡಗು ಜಿಲ್ಲಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಕೊಡವ ಸಂಸ್ಕೃತಿಗೆ ವಿಶಿಷ್ಟ ಗೌರವವಿದೆ ಎಂದರು.
ಈ ಸಾಂಸ್ಕೃತಿಕ ಉತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಮಾತನಾಡಿ, ಕೊಡಗು ಕನ್ನಡ ನಾಡಿನ ಕಾಶ್ಮೀರವಿದ್ದಂತೆ ಎಂದು ಬಣ್ಣಿಸಿದರು. ಇಲ್ಲಿನ ಜನ ತಮ್ಮ ಶೌರ್ಯ ಪರಾಕ್ರಮಗಳಿಂದ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ್ದಾರೆ ಎಂದರು.
ವೈಭವದ ಈ ಸಮಾರಂಭದಲ್ಲಿ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ. ಅಪ್ಪಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರದ ವಿಶೇಷಾಧಿಕಾರಿ ಮ.ಗು. ಸದಾನಂದಯ್ಯ, ಕೊಡಗು ಜಿಲ್ಲಾ ಪರಿಷತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ಬಲದೇವ ಕೃಷ್ಣ ಮೊದಲಾದವರು ಭಾಗವಹಿಸಿದ್ದರು. ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಲಾ ಪ್ರಕಾರಗಳ ಪ್ರದರ್ಶನವೂ ಈ ಸಂದರ್ಭದಲ್ಲಿ ನಡೆಯಿತು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications