ಸಚಿನ್ ತೆಂಡೂಲ್ಕರ್ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ
ಪೋರ್ಟ್ ಎಲಿಜಬೆತ್ : ಪ್ರಚಂಡ ಆಟದಷ್ಟೇ ಸಭ್ಯತೆಗೂ ಪ್ರಸಿದ್ಧರಾದ ಭಾರತದ ಸ್ಟಾರ್ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಇದೀಗ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿದ್ದಾರೆ. ಈವರೆಗು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವೇಗದ ಬೌಲರ್‌ಗಳಿಗೆ ಸೀಮಿತವಾಗಿದ್ದ ಚೆಂಡು ವಿರೂಪಗೊಳಿಸುವ ಆರೋಪ ಭಾರತದ ಆಟಗಾರರಿಗೆ ಅಂಟಿಕೊಂಡಿರುವುದು ವಿಶೇಷ.
ಪ್ರಸ್ತುತ ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ತೆಂಡೂಲ್ಕರ್ ಚೆಂಡು ವಿರೂಪಗೊಳಿಸುವ ಪ್ರಯತ್ನ ನಡೆಸಿದರು ಎನ್ನುವ ಬಗ್ಗೆ ಪಂದ್ಯದ ಆಯೋಜಕರು ಟೆಲಿವಿಷನ್ ಸಾಕ್ಷ್ಯ ಸಂಪಾದಿಸಿದ್ದಾರೆ. ಮ್ಯಾಚ್ ರೆಫರಿ ಮೈಕ್ ಡೆನ್ನಿಸ್(ಇಂಗ್ಲೆಂಡಿನ ಮಾಜಿ ನಾಯಕ) ಅವರು ಕೂಡ ತೆಂಡೂಲ್ಕರ್ ಚೆಂಡು ವಿರೂಪಗೊಳಿಸಿದ್ದನ್ನು ಖಚಿತಪಡಿಸಿದ್ದಾರೆ. ಆದರೆ, ಘಟನೆಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಚೆಂಡು ವಿರೂಪಗೊಳಿಸಿದ ಬಗೆಗೆ ಪಂದ್ಯದ ಅಂಪೈರ್‌ಗಳಿಂದಾಗಲೀ ಅಥವಾ ದಕ್ಷಿಣ ಆಫ್ರಿಕಾದ ಆಟಗಾರರಿಂದಾಗಲೀ, ಈವರೆಗೆ ಯಾವುದೇ ದೂರು ರೆಫರಿಗೆ ಬಂದಿಲ್ಲ . ಆದರೆ, ಪಂದ್ಯದ ಆಯೋಜಕರು ಚೆಂಡು ವಿರೂಪಗೊಳಿಸಿದ ಆರೋಪವನ್ನು ರೆಫರಿ ಬಳಿಗೆ ಒಯ್ದಿದ್ದಾರೆ. ಏನಾಗುತ್ತದೋ ನೋಡಬೇಕು? ಅಂದಹಾಗೆ, ತೆಂಡೂಲ್ಕರ್ ಚೆಂಡು ವಿರೂಪಗೊಳಿಸುತ್ತಾರೆ ಎನ್ನುವುದನ್ನು ನೀವು ನಂಬುವಿರಾ?
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications