ಆಪ್ಘನ್ ಯುದ್ಧ :ಅಮೆರಿಕಾದ ಅಸಂಪೂರ್ಣ ಸಿದ್ಧತೆ-ವಾಜಪೇಯಿ
ವಾಷಿಂಗ್ಟನ್ : ಆಪ್ಘಾನಿಸ್ತಾನ ವಿರುದ್ಧದ ಯುದ್ಧಕ್ಕೆ ಅಮೆರಿಕಾ ತಕ್ಕ ಸಿದ್ಧತೆ ಮಾಡಿಕೊಂಡಿಲ್ಲ ಹಾಗೂ ಪ್ರಸಕ್ತ ಗೆಲುವಿಗಾಗಿ ಭೂದಾಳಿ ಅಗತ್ಯವಾಗಿದೆ ಎಂದು ಪ್ರಧಾನಿ ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದಕತೆಯ ವಿರುದ್ಧದ ಆಂದೋಲನ ಸಂಪೂರ್ಣ ತೃಪ್ತಿಕರವಾಗಿಲ್ಲ . ಆಪ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನನ್ನು ಬಗ್ಗು ಬಡಿಯಲು ಹಾಗೂ ತಾಲಿಬಾನಿಗಳನ್ನು ಅಡಗುತಾಣಗಳಿಂದ ಹೊರಗೆಡವಲು ಭೂದಾಳಿ ಅನಿವಾರ್ಯ ಎಂದು ವಾಷಿಂಗ್ಟನ್ ಪೋಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ವಾಜಪೇಯಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್ ಲ್ಯಾಡೆನ್ ಹಾಗೂ ಅಲ್-ಖೈದಾ ವಿರುದ್ಧದ ಅಮೆರಿಕಾ ನೇತೃತ್ವದ ದಾಳಿ ವಾಯುದಾಳಿಯನ್ನೇ ಅವಲಂಬಿಸಿದೆ. ಈ ದಾಳಿ ಒಂದು ದಿನ ಬಿರುಸು ಕಳೆದುಕೊಂಡಿದ್ದರೆ, ಇನ್ನೊಂದು ದಿನ ಅಬ್ಬರದಿಂದ ಕೂಡಿರುತ್ತದೆ. ಈ ದಾಳಿ ಸಮರ್ಪಕ ಗುಪ್ತಚಾರ ದಳದ ಮಾಹಿತಿ ಕೊರತೆಯಿಂದ ಕೂಡಿದೆ. ತಾಲಿಬಾನ್ ವಿರೋಧಿ ದಳಕ್ಕೆ ಅವಶ್ಯಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿಲ್ಲ ಎಂದು ವಾಜಪೇಯಿ ಹೇಳಿದರು.
ಆಯುಧ ಕೆಳಗಿಡಿ, ಚುನಾವಣೆಯಲ್ಲಿ ಭಾಗವಹಿಸಿ
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕರು ಶಸ್ತ್ರ ಕೆಳಗಿಳಿಸಿ, ಬರುವ ವಿಧಾನಸಭೆ ಚುನಾವಣೆಗಳಲ್ಲಿ ಭಾಗಿಯಾಗಬೇಕೆಂದು ವಾಜಪೇಯಿ ತಮ್ಮ ಸಂದರ್ಶನದಲ್ಲಿ ಕರೆ ನೀಡಿದ್ದಾರೆ. ಪರ್ವೇಜ್ ಮುಷರ್ರಫ್ ಅವರು ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರ ಕೊಳ್ಳದಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ವಾಜಪೇಯಿ ಅಭಿಪ್ರಾಯ ಪಟ್ಟಿದ್ದಾರೆ.
(ಪಿಟಿಐ)