ಗುಡುಗು ಮಿಂಚಿನ ಕಾರುಬಾರಿಗೆ ಸುಳ್ಯದ ವಿದ್ಯುತ್ ವ್ಯವಸ್ಥೆ ಕಂಗಾಲು
ಸುಳ್ಯ: ಕಳೆದೆರಡು ದಿನಗಳಲ್ಲಿ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಸಿಡಿಲು ಗುಡುಗಿನ ಹಾವಳಿಯಿಂದಾಗಿ ಹಲವು ಮನೆ ಹಾಗೂ ಅಂಗಡಿ ಮುಂಗಟ್ಟುಗಳ ವಿದ್ಯುತ್ ವ್ಯವಸ್ಥೆ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ.
ಇಲ್ಲಿನ ಬಳ್ಪದ ಕೆನ್ಯಾರು ಪ್ರದೇಶದಲ್ಲಿ ಮನೆಯಾಂದಕ್ಕೆ ಸಿಡಿಲು ಬಡಿದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮನೆಯ ಗೋಡೆಗಳು ಕುಸಿದು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ನೆಟ್ಟಾರು ಸಮೀಪದ ಕಜೆ ಎಂಬಲ್ಲಿ ಪುಟ್ಟ ಭೈರ ಎಂಬುವರ ಮನೆಗೆ ಸಿಡಿಲು ಬಡಿದ ಕಾರಣ ಮನೆಯ ಗೋಡೆಗೆ ಹಾನಿಯಾಗಿದ್ದು, ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.
ಮುರುಳ್ಯ ಗ್ರಾಮದ ಶಾಂತಿನಗರದಲ್ಲಿ ಅಬೂಬಕ್ಕರ್ ಮನೆಗೆ ಸಿಡಿಲು ಬಡಿದು ಗೋಡೆಯ ಕಲ್ಲುಗಳು ಕುಸಿದು ಬಿದ್ದು ಮನೆಯ ನಿವಾಸಿಗಳಿಗೆ ಗಾಯಗಳಾಗಿವೆ. ಇಲ್ಲಿನ ಹಲವು ಮನೆಗಳಲ್ಲಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಕೆಟ್ಟು ಹೋಗಿದೆ. ಪೈಚಾರಿನಲ್ಲಿ ಬಿರುಗಾಳಿಗೆ ಮಗುಚಿದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ.
(ಇನ್ಫೋ ವಾರ್ತೆ)












Click it and Unblock the Notifications