ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರದಿಂದ ಮಣ್ಣಿನ ಮಗ ದೇವೇಗೌಡರ ಬೆಂಗಳೂರು ಚಲೋ

By Staff
|
Google Oneindia Kannada News

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸರ್ಕಾರವನ್ನು ಉರುಳಿಸುವ ಉಮೇದಿನಿಂದ ಸದ್ದು ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ರೈತಪರ ಪಾದಯಾತ್ರೆ ವಿಠಲೇನಹಳ್ಳಿಯಿಂದ ಭಾನುವಾರ ಪ್ರಾರಂಭವಾಗಲಿದೆ. ಯಾತ್ರೆಯ ಹೆಸರು ಬೆಂಗಳೂರು ಚಲೋ. ಅವರ ಪಟಾಲಂ ಕೂಡ ಐದು ದಿನಗಳ ಕಾಲದ 80 ಕಿಲೋಮೀಟರ್‌ ದೂರದ ಈ ಯಾತ್ರೆಯಲ್ಲಿರುತ್ತದೆ.

ರೈತಪರ ಧೋರಣೆಯಾಟ್ಟಿಗೇ ರಾಜಕೀಯ ರಂಗದಲ್ಲಿ ಹೊಸ ವರಸೆ ತೆಗೆದಿರುವ ದೇವೇಗೌಡರ ಹುಮ್ಮಸ್ಸು ಶನಿವಾರದ ಸುದ್ದಿಗಾರರೊಟ್ಟಿಗೆ ಮಾತಾಡುವಾಗ ಇಣುಕುತ್ತಿತ್ತು. ಕೃಷ್ಣ ಸರ್ಕಾರ ಅದು ಮಾಡಲಿಲ್ಲ , ಇದು ಮಾಡಲಿಲ್ಲ ಎಂಬ ಮಾತುಗಳು ಪುನರುಚ್ಚಾರವಾದವು. ಕಾಂಗ್ರೆಸ್ಸಿಗರು ನನ್ನದು ಹೊಲಸು ರಾಜಕಾರಣ ಎಂದಿದ್ದಾರೆ. ವಿಠಲೇನಹಳ್ಳಿಯಲ್ಲಿ ನೀರಾ ಚಳವಳಿ ವೇಳೆ ಮೃತಪಟ್ಟ ಇಬ್ಬರು ರೈತರ ಪ್ರಕರಣವನ್ನೇ ನಾನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ದೂರಿದ್ದಾರೆ. ಸರಿ, ನಾನು ಈ ಪಾಪ ಪರಿಹರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತೇನೆ ಎಂದು ಕಟಕಿಯಾಡಿದರು.

ಪಾದಯಾತ್ರೆ ಹಾದಿಯಲ್ಲಿ ಚನ್ನಪಟ್ಟಣ, ರಾಮನಗರ, ಬಿಡದಿ ಮತ್ತು ಕೆಂಗೇರಿಗಳಲ್ಲಿ ಗೌಡರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮಗಳಿವೆ. ಕೆಲವರು ರೈತರನ್ನು ತಮ್ಮ ಆಸ್ತಿ ಎಂದು ತಿಳಿದು ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂಬ ಮುಖ್ಯಮಂತ್ರಿಗಳ ಪರೋಕ್ಷ ಟೀಕೆಯ ಬಗ್ಗೆ ಸುದ್ದಿಗಾರರೆತ್ತಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಗೌಡರು, ನಾನು ಅರ್ಥಹೀನ ಹಾಗೂ ಅಗೌರವಕ್ಕೆ ಈಡಾಗುವಂಥಾ ಪ್ರತಿಕ್ರಿಯೆ ಕೊಡಲು ಇಚ್ಛಿಸುವುದಿಲ್ಲ . ಪಾದಯಾತ್ರೆ ಯಾವುದೇ ಗದ್ದಲಗಳಿಲ್ಲದೆ ನಡೆಯಲಿದ್ದು, ನವೆಂಬರ್‌ 1 ರಂದು ರೈತರ ಜಾಥಾದೊಂದಿಗೆ ಕೊನೆಯಾಗಲಿದೆ ಎಂದರು.

ದೇವೇಗೌಡರ ಅಬ್ಬರ ಅಡಗಿಸುವ ಯತ್ನ :ಈ ನಡುವೆ, ರಾಜ್ಯ ಸರಕಾರವು 252 ಲಕ್ಷ ಪರಾವಲಂಬಿಗಳನ್ನು ಉತ್ಪಾದಿಸಿ, ಅವುಗಳನ್ನು ತೆಂಗಿನ ಮರಗಳಿಗೆ ಬಿಡುವ ಮೂಲಕ ನುಸಿರೋಗವನ್ನು ಜೈವಿಕವಾಗಿ ನಿಯಂತ್ರಿಸಲು ನಿರ್ಧರಿಸಿದೆ. ಈ ವಿಷಯವನ್ನು ಕೇಂದ್ರ ಕೃಷಿ ಸಚಿವ ಅಜಿತ್‌ ಸಿಂಗ್‌ ದೇವೇಗೌಡರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ನುಸಿ ರೋಗ ನಿಯಂತ್ರಣಕ್ಕಾಗಿ ರಾಜ್ಯಕ್ಕೆ 7.90 ಕೋಟಿ ರೂಪಾಯಿಗಳ ನೆರವನ್ನೂ ಕೇಂದ್ರ ಈಗಾಗಲೇ ಬಿಡುಗಡೆ ಮಾಡಿದೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X