ಯುದ್ಧಾನಂತರ ಆಫ್ಘನ್ ಪುನನಿರ್ಮಾಣ : ಅಮೆರಿಕ ಇಂಗಿತ
ವಾಷಿಂಗ್ಟನ್ : ಆಫ್ಘಾನಿಸ್ತಾನದ ಮಿಲಿಟರಿ ಆಡಳಿತ ತಾಲಿಬಾನ್ ಮೂಲೋತ್ಪಾಟನೆ ಆದ ಬಳಿಕ, ಆಫ್ಘಾನಿಸ್ತಾನವನ್ನು ಪುನರ್ನಿರ್ಮಾಣ ಮಾಡಿ, ಅಲ್ಲಿ ಶಾಂತಿಪಡೆ ನಿಯೋಜಿಸಲು ಅಮೆರಿಕ ಚಿಂತಿಸುತ್ತಿದೆ. ಈ ವಿಷಯವನ್ನು ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೋವೆಲ್ ಸೋಮವಾರ ತಿಳಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಯುದ್ಧದ ನಂತರ ನಿಯೋಜಿಸಲುದ್ದೇಶಿಸಿರುವ ಶಾಂತಿ ಪಾಲನಾ ಪಡೆಗೆ ಸಂಬಂಧಿಸಿದಂತೆ ಅಮೆರಿಕ - ಯುರೋಪ್ ಹಾಗೂ ವಿಶ್ವಸಂಸ್ಥೆಯ ನಡುವೆ ತಿಕ್ಕಾಟ ನಡೆಯುತ್ತಿದೆ ಎಂಬ ಸುದ್ದಿಯನ್ನು ಪೋವೆಲ್ ನಿರಾಕರಿಸಿದರು. ಆದರೆ, ಮುಂದೆ ಆಫ್ಘಾನಿಸ್ತಾನಕ್ಕೆ ಒಳಿತಾಗುವ ರೀತಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಕಾಬೂಲ್ ವರದಿ: ಹೆರಾತ್‌ನಲ್ಲಿರುವ ಆಫ್ಘನಿಸ್ತಾನದ ಎರಡನೇ ಅತಿದೊಡ್ಡ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ, ಅಮೆರಿಕ ಬಾಂಬ್ ದಾಳಿಯಿಂದ ನಾಶವಾಗಿ ಹೋಗಿದೆ. ತಾಲಿಬಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಭಕ್ತಾರ್ ಸೋಮವಾರ ಈ ವಿಷಯ ತಿಳಿಸಿದೆ.
ಭಾನುವಾರ ರಾತ್ರಿ ಅಮೆರಿಕದ ಬಾಂಬ್ ಬಿದ್ದಾಗ ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿ ಹಾಗೂ ರೋಗಿಗಳು ಇದ್ದರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ಅಬ್ದುಲ್ ಹನಾನ್ ತಿಳಿಸಿದ್ದಾರೆ. ಈ ದಾಳಿಯಲ್ಲಿ ಭಾರಿ ಸಾವು ನೋವು ಸಂಭವಿಸಿದೆ ಎನ್ನಲಾಗಿದೆ. ಆದರೆ, ಎಷ್ಟು ಮಂದಿ ಸತ್ತಿದ್ದಾರೆ ಎಂಬುದು ತತ್‌ಕ್ಷಣದಲ್ಲಿ ಲಭ್ಯವಾಗಿಲ್ಲ.
(ಎಎಫ್‌ಪಿ)












Click it and Unblock the Notifications