‘ಯುದ್ಧಭೀತಿ ಉಂಟಾದಲ್ಲಿ ಭಾರತದಿಂದ ಪಾಕ್‌ನ ಅಣ್ವಸ್ತ್ರಕೋಠಿ ನಾಶ’
ವಾಷಿಂಗ್ಟನ್: ಪಾಕಿಸ್ತಾನದ ಅಣ್ವಸ್ತ್ರಗಳು ಉಗ್ರರ ಕೈಗೆ ದೊರೆಯುವಂಥ ಸಂದರ್ಭ ಸೃಷ್ಟಿಯಾದಲ್ಲಿ , ಪಾಕ್‌ನ ಅಣ್ವಸ್ತ್ರ ಕೋಠಿಯನ್ನು ನಾಶಗೊಳಿಸಲು ಭಾರತ ಪ್ರಯತ್ನ ನಡೆಸುತ್ತದೆಂದು ಅಮೆರಿಕಾದ ಯುದ್ಧತಂತ್ರ ವಿಶಾರದರು ಅಭಿಪ್ರಾಯಪಟ್ಟಿದ್ದಾರೆ.
ಪಾಕ್‌ನ ಅಣ್ವಸ್ತ್ರಗಳು ಉಗ್ರರ ಪಾಲಾಗುತ್ತಿದ್ದರೆ, ಜಗತ್ತಿನ ಕೆಲವೇ ಕೆಲವು ಅಣ್ವಸ್ತ್ರ ರಾಷ್ಟ್ರಗಳಲ್ಲೊಂದಾದ ಭಾರತ ಕೈ ಕಟ್ಟಿ ಕೂರುವುದಿಲ್ಲ ಎನ್ನುವ ವರದಿಯನ್ನು ಕದನ ವಿಶಾರದರ ಅಭಿಪ್ರಾಯಗಳನ್ನುಲ್ಲೇಖಿಸಿ ‘ದಿ ವಾಷಿಂಗ್ಟನ್ ಪೋಸ್ಟ್ ’ ಪ್ರಕಟಿಸಿದೆ. ಏಷ್ಯಾ ಉಪಖಂಡದಲ್ಲಿ ಮತ್ತೊಂದು ಯುದ್ಧಭೀತಿ ಉಂಟಾದಲ್ಲಿ , ಪಾಕಿಸ್ತಾನದ ಅಣ್ವಸ್ತ್ರಾಗಾರವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ನಾಶಗೊಳಿಸಬಹುದು ಎಂದು ವರದಿ ತಿಳಿಸಿದೆ.
ಭಾರತ ಹಾಗೂ ಪಾಕಿಸ್ತಾನಗಳನ್ನು ಒಳಗೊಂಡಂತೆ ಅಮೆರಿಕಾದ ಮಿಲಿಟರಿ 25 ಸಮರ ಕ್ರೀಡೆಗಳನ್ನು ನಡೆಸಿದ್ದು , ಪ್ರತಿಯಾಂದೂ ಅಣ್ವಸ್ತ್ರ ಸಮರದಲ್ಲೇ ಕೊನೆಗೊಂಡಿರುವುದಾಗಿ ಯುದ್ಧತಂತ್ರಗಳನ್ನು ರೂಪಿಸುವುದರಲ್ಲಿ ಎತ್ತಿದ ಕೈ ಎನಿಸಿರುವ ವಾಯುದಳದ ನಿವೃತ್ತ ಅಧಿಕಾರಿ ಸ್ಯಾಮ್ ಗಾರ್ಡಿನರ್ ಹೇಳಿದ್ದಾರೆ.
ಆಂತರಿಕ ಕ್ಷೋಭೆಯಿಂದ ಪಾಕಿಸ್ತಾನದದಲ್ಲಿನ ಪ್ರಸಕ್ತ ಆಡಳಿತಾರೂಢ ಸರ್ಕಾರ ಕುಸಿದುಬೀಳಬಹುದೆನ್ನುವ ಆತಂಕವೂ ಅಮೆರಿಕ ತಜ್ಞರನ್ನು ಕಾಡುತ್ತಿದೆ. ಆದರೆ, ಈ ರೀತಿಯ ಸಂದಿಗ್ಧ ಪರಿಸ್ಥಿತಿ ಉಂಟಾದಲ್ಲಿ ಅಮೆರಿಕಾದ ಇತರ ಇಸ್ಲಾಂ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಈಜಿಪ್ಟ್ , ಪಾಕ್ ಸ್ಥಾನವನ್ನು ತುಂಬಬಹುದೆಂದು ಅವರು ಊಹಿಸಿದ್ದಾರೆ.
ಮತ್ತೊಬ್ಬ ರಕ್ಷಣಾ ವಿಶ್ಲೇಷಕ ಹರ್ಲನ್ ಉಲ್‌ಮನ್ ಹೇಳುವಂತೆ- ‘ಸಂಪೂರ್ಣ ಇಸ್ಲಾಮೀಕರಣ ಬಣ’, ತೈಲ ಹಾಗೂ ಅಣ್ವಸ್ತ್ರಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ದೂರಗಾಮಿ ಸಾಧ್ಯತೆಯೂ ಇದೆ, ಅದು ದುಸ್ವಪ್ನವೇ ಸರಿ.
(ಪಿಟಿಐ)












Click it and Unblock the Notifications