ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿ ನವೆಂಬರ್‌ನಲ್ಲಿ

By Staff
|
Google Oneindia Kannada News

ಬೆಂಗಳೂರು : 1,788 ರಸ್ತೆಗಳ ಕಾಮಗಾರಿಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರ 887 ಕೋಟಿ ರುಪಾಯಿ ವೆಚ್ಚ ಮಾಡಿದೆ. ಇದರಿಂದಾಗಿ ರಾಜ್ಯದ ರಸ್ತೆಗಳಲ್ಲಿ ಗಣನೀಯ ಅಭಿವೃದ್ಧಿ ಆಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಎನ್‌. ಧರ್ಮಸಿಂಗ್‌ ತಿಳಿಸಿದ್ದಾರೆ.

ಕೃಷ್ಣ ನೇತೃತ್ವದ ಸರಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್‌ ಏರ್ಪಡಿಸಿದ್ದ ಸಚಿವರೊಂದಿಗೆ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧರ್ಮಸಿಂಗ್‌, ರಾಜ್ಯದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಮಂತ್ರಿಗಳ ಗೋಲ್ಡನ್‌ ಕ್ವಾಡ್ರಾಂಗಲ್‌ (ಸುವರ್ಣಚತುರ್ಭುಜ ಯೋಜನೆ) ಯೋಜನೆಯಿಂದ 3200 ಕೋಟಿ ರುಪಾಯಿ ಮತ್ತು ವರ್ಲ್ಡ್‌ ಬ್ಯಾಂಕ್‌ನಿಂದ 2030 ಕೋಟಿ ರುಪಾಯಿ ನೆರವು ಪುಷ್ಟಿ ನೀಡಿದೆ ಎಂದರು.

ತಮ್ಮ ಇಲಾಖೆಯ ಸಾಧನೆಗಳ ಬಗ್ಗೆ ಅಂಕಿ ಅಂಶ ಒದಗಿಸಿದ ಧರ್ಮಸಿಂಗ್‌, ರಾಜ್ಯ ಸರಕಾರವು ಕೈಗೆತ್ತಿಕೊಂಡಿರುವ 153 ಸೇತುವೆಗಳ ಪೈಕಿ, 120 ಸೇತುವೆಗಳನ್ನು ಕೇವಲ 10 ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಿದ ಸಾಧನೆ ಮಾಡಿದೆ ಎಂದರು.

ವಿಶ್ವಬ್ಯಾಂಕ್‌ ನೆರವಿನಿಂದ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಯನ್ನು ರಾಜ್ಯದ ವಿವಿಧ ಕಡೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆ ಕಾಮಗಾರಿ ನವೆಂಬರ್‌ ಕೊನೆಯ ವಾರದಲ್ಲಿ ಆರಂಭವಾಗಲಿದೆ ಎಂದು ಸಿಂಗ್‌ ತಿಳಿಸಿದರು.

ಬೆಂಗಳೂರಿನ ವಿವಿಧೆಡೆ ಇರುವ ರಾಜ್ಯ ಸರಕಾರಿ ಕಚೇರಿಗಳ ಕಟ್ಟಡಗಳಿಗೆ ಸರಕಾರ ಪ್ರತಿತಿಂಗಳು 5 ಕೋಟಿ ರುಪಾಯಿ ಬಾಡಿಗೆ ನೀಡುತ್ತಿದೆ. ಈ ಹೊರೆ ತಪ್ಪಿಸಲು ಮತ್ತು ಎಲ್ಲ ಕಚೇರಿಗಳನ್ನೂ ಒಂದೇ ಸೂರಿನಡಿ ತರಲು, ವಿಧಾನಸೌಧದ ಪಕ್ಕದಲ್ಲಿ (ಸರಕಾರಿ ಮುದ್ರಣಾಲಯ ಜಾಗದಲ್ಲಿ) ವಿಧಾನಸೌಧದ ಪ್ರತಿರೂಪದಂತೆಯೇ ದಕ್ಷಿಣ ಬ್ಲಾಕ್‌ ನಿರ್ಮಿಸಲಾಗುತ್ತಿದೆ.

ವಿಧಾನಸೌಧದ ದಕ್ಷಿಣ ಬ್ಲಾಕ್‌ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 36 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂಬ ವಿಶ್ವಾಸವನ್ನು ಧರ್ಮಸಿಂಗ್‌ ವ್ಯಕ್ತಪಡಿಸಿದರು. ಸಂಚಾರದ ಒತ್ತಡ ತಪ್ಪಿಸಲು ಬೆಂಗಳೂರಿನಂತೆಯೇ ಬೆಳಗಾವಿ, ಹುಬ್ಬಳ್ಳಿ, ಮೈಸೂರು ಮತ್ತಿತರ ಪಟ್ಟಣಗಳಲ್ಲಿ ಕೂಡ ಮೇಲ್ಸೇತುವೆ ನಿರ್ಮಿಸುವ ಯೋಚನೆ ಸರಕಾರಕ್ಕಿದೆ ಎಂದರು.

ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಪ್ರೆಸ್‌ಕ್ಲಬ್‌ ಅಧ್ಯಕ್ಷರಾದ ಪಿ.ಟಿ.ಐ ಸುದ್ದಿ ಸಂಸ್ಥೆಯ ಪ್ರಧಾನ ವರದಿಗಾರ ಸಿದ್ಧರಾಜು, ಕನ್ನಡ.ಇಂಡಿಯಾಇನ್‌ಫೋ.ಕಾಂ ಸಂಪಾದಕ ಹಾಗೂ ಕ್ಲಬ್‌ ಕಾರ್ಯದರ್ಶಿ ಎಸ್‌.ಕೆ. ಶಾಮಸುಂದರ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X