ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಪರ್ವಕ್ಕೆ ಎರಡು ವರ್ಷ : ಇವರು ಹೀಗಂತಾರೆ ..

By Staff
|
Google Oneindia Kannada News

ಎಸ್‌.ಎಂ. ಕೃಷ್ಣ ದೇಶದ ಅತ್ಯುತ್ತಮ ಮುಖ್ಯಮಂತ್ರಿಎನ್ನುತ್ತದೆ ಇಂಡಿಯಾ ಟುಡೇ- ಆರ್ಗ್‌ಮಾರ್ಗ್‌ ಸಮೀಕ್ಷೆ . ಇದು ಶತಮಾನದ ಜೋಕು ಎನ್ನುತ್ತಾರೆ ವಿರೋಧಪಕ್ಷಗಳ ಮುಖಂಡರು.

ಅಕ್ಟೋಬರ್‌ 11, 2001 ಕ್ಕೆ ಕೃಷ್ಣ ಸರ್ಕಾರಕ್ಕೆ 2 ವರ್ಷ. ಈ ಅವಧಿಯಲ್ಲಿ ಅವರ ಸಾಧನೆಗಳೇನು, ಹಿನ್ನಡೆಗಳೇನು? ಕೃಷ್ಣ ಎಡವಿದ್ದೆಲ್ಲಿ, ಎದ್ದು ನಿಂತಿದ್ದೆಲ್ಲಿ ಎನ್ನುವುದರ ಪಟ್ಟಿ ಮಾಡುವ ಬದಲು ಕೃಷ್ಣ ಸರ್ಕಾರದ ಬಗ್ಗೆ ಯಾರು ಏನು ಹೇಳುತ್ತಾರೆ ಅನ್ನುವುದಕ್ಕೆ ಕಿವಿ ಕೊಡುವುದು ಒಳ್ಳೆಯದು. ಕೃಷ್ಣ ಸರ್ಕಾರವನ್ನು ವಿಮರ್ಶೆಯ ನಿಕಷಕ್ಕೊಡ್ಡುವ ಅಭಿಪ್ರಾಯಗಳು ಇಲ್ಲಿವೆ, ನಿಮ್ಮ ಅವಲೋಕನಕ್ಕಾಗಿ.

ರೈತರ ಮೇಲೆ ಗುಂಡು ಹಾರಿಸಿದ ದೊಡ್ಡಹಳ್ಳಿ ಪ್ರಕರಣದ ನಂತರ ಗುಂಡೂರಾವ್‌ ಸರ್ಕಾರ ಪತನವಾಯಿತು. ಕುಣಿಗಲ್‌ನಲ್ಲಿ ಗುಂಡು ಹಾರಿಸಿದ ಪ್ರಕರಣ ರಮೇಶ್‌ರ ಸಚಿವ ಸ್ಥಾನಕ್ಕೆ ಮುಳುವಾಯಿತು. ವಿಠಲೇನಾಹಳ್ಳಿಯಲ್ಲಿ ರೈತರ ಮೇಲೆ ನಡೆಸಿದ ಗೋಲಿಬಾರ್‌ ಪ್ರಕರಣ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮುಳುವಾಗಲಿದೆ.
- ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ರೈತರು ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸುವ ಸರ್ಕಾರ ಹೆಚ್ಚುಕಾಲ ಬಾಳುವುದಿಲ್ಲ . ರೈತರ ಮೇಲೆ ಗೋಲಿಬಾರ್‌ ಮಾಡಿಸಿರುವ ಕೃಷ್ಣ ಸರ್ಕಾರವೂ ಹೆಚ್ಚುಕಾಲ ಇರುವುದಿಲ್ಲ . ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ದೇಶದ ಆಧಾರಸ್ತಂಭ ಎನ್ನುವುದನ್ನು ಕೃಷ್ಣ ಮರೆತಿದ್ದಾರೆ.
- ರಾಮಕೃಷ್ಣ ಹೆಗಡೆ, ಮಾಜಿ ಮುಖ್ಯಮಂತ್ರಿ

ವಿಶ್ವಬ್ಯಾಂಕ್‌ನಿಂದ ಸಾಲ ತಂದದ್ದೇ ದೊಡ್ಡ ಸಾಧನೆ ಎಂದು ಕೃಷ್ಣ ಹೇಳಿಕೊಳ್ಳುತ್ತಿದ್ದಾರೆ. ಅದು ಅವರ ಮೂರ್ಖತನ. ಸರ್ಕಾರ ಅಧೋಗತಿಗೆ ಇಳಿಯ್ತುತಿರುವ ಲಕ್ಷಣವದು.
- ಎಸ್‌. ಸಿದ್ಧರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ

ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೂ ಆ ರಾಜ್ಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿನಿಂದ ವಂಚಿತವಾಗುತ್ತದೆ ಎಂದು ಸೋನಿಯಾಗಾಂಧಿ ಹೇಳಿದ್ದರು. ಕೃಷ್ಣ ಆಡಳಿತದಲ್ಲಿ 100 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋನಿಯಾ ಮೇಡಂ ಏನಂತಾರೆ?
- ಬಸವರಾಜ ಪಾಟೀಲ ಸೇಡಂ, ಬಿಜೆಪಿ ರಾಜ್ಯಾಧ್ಯಕ್ಷ

ರಸ್ತೆ, ಬಡವರಿಗೆ ಮನೆ, ಆಡಳಿತ ಸುಧಾರಣೆ ಆಯೋಗ, ಉತ್ತರ ಕರ್ನಾಟಕ ಅಸಮತೋಲನ ನಿವಾರಣೆಗೆ ಸಮಿತಿ ರಚನೆ ಮುಂತಾದ ಕ್ರಮಗಳು ಸ್ವಾಗತಾರ್ಹ. ವೈಫಲ್ಯಗಳು ಇಲ್ಲ ಎಂದೇನಲ್ಲ . ಹೈಕಮಾಂಡ್‌ನ ಸಂಪೂರ್ಣ ಆಶೀರ್ವಾದ ಇದ್ದರೂ, ಪ್ರತಿಪಕ್ಷಗಳು ದುರ್ಬಲವಾಗಿದ್ದರೂ ಸರ್ಕಾರ ರೈತರ ಭಾವನೆಗಳಿಗೆ ಸ್ಪಂದಿಸಿಲ್ಲ. ಅವರ ನಡೆ ನುಡಿ, ಉದ್ಯಮ ಸಮುದಾಯದವರ ಮೇಲಿನ ಪ್ರೀತಿಯನ್ನು ನೋಡಿದರೆ ಕೃಷ್ಣ ಬಿಜೆಪಿ ಮುಖ್ಯಮಂತ್ರಿಯಾಗಿರಲೇ ಲಾಯಕ್ಕು ಎನಿಸುತ್ತೆ.
- ಪಿಜಿಆರ್‌ ಸಿಂಧ್ಯಾ, ಸಂಯುಕ್ತ ಜನತಾದಳ ನಾಯಕ

ರಸ್ತೆಗಳ ಅಭಿವೃದ್ಧಿ ಮತ್ತು ಸುಧಾರಣೆ, ದಾಖಲೆ ಪ್ರಮಾಣದಲ್ಲಿ ಆಶ್ರಯ ಮನೆ ನಿರ್ಮಾಣ, ವಿಶ್ವವೇ ನಿಬ್ಬೆರಗಾಗಿ ನೋಡುವ ಐಟಿ ಸಾಧನೆ, ವೀರಪ್ಪನ್‌ ವಶದಿಂದ ವರನಟ ರಾಜ್‌ಕುಮಾರ್‌ ಸುರಕ್ಷಿತ ಬಿಡುಗಡೆ, ಕೃಷಿ ಉತ್ಪನ್ನಗಳ ಖರೀದಿಗೆ ರೈತರಿಗೆ ನೆರವು- ಇದಕ್ಕಿಂಥ ಸಾಧನೆಗಳು ಇನ್ನೇನು ಬೇಕು.
- ಅಲ್ಲಂ ವೀರಭದ್ರಪ್ಪ , ಕೆಪಿಸಿಸಿಐ ಅಧ್ಯಕ್ಷ

ಸರ್ಕಾರದ ಎರಡು ವರ್ಷಗಳ ಸಾಧನೆ ನೂರಕ್ಕೆ ನೂರರಷ್ಟು ತೃಪ್ತಿ ತಂದಿದೆ. ಇದು ರಾಜ್ಯದ ಪ್ರತಿಯಾಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಷಯ.
- ಡಾ.ಮನಮೋಹನ್‌ ಸಿಂಗ್‌, ಕೇಂದ್ರದ ಮಾಜಿ ಅರ್ಥಸಚಿವ

ಎರಡು ವರ್ಷಗಳ ಸಾಧನೆ ತೃಪ್ತಿ ತಂದಿದೆ. ಭಾರೀ ಸಾಧನೆ ಎಂದೇನೂ ಇಲ್ಲ . ಆದರೆ, ಚುನಾವಣೆ ಪ್ರಣಾಳಿಕೆಯನ್ನು ಈಡೇರಿಸುವತ್ತ ದಾಪುಗಾಲಿಟ್ಟಿದ್ದೇವೆ.
- ಟಿ.ಬಿ.ಜಯಚಂದ್ರ, ಕೃಷಿ ಸಚಿವ

ಹೈಕೋರ್ಟ್‌, ಸುಪ್ರಿಂಕೋರ್ಟ್‌ಗಳಿಂದ ಛೀಮಾರಿ ಹಾಕಿಸಿಕೊಂಡಿದ್ದೇ ಸರ್ಕಾರದ ಎರಡು ವರ್ಷಗಳ ದೊಡ್ಡ ಸಾಧನೆ.
- ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷದ ನಾಯಕ

ಆಕರ್ಷಕ ಭ್ರಮೆಗಳನ್ನು ಹುಟ್ಟಿಸಿದ್ದೇ ಎರಡು ವರ್ಷಗಳ ಸಾಧನೆ. ಸಾಲ ಮಾಡಿಯಾದರೂ ಹೋಳಿಗೆ ಉಣ್ಣು ಎನ್ನುವುದು ಈ ಸರ್ಕಾರದ ಜಾಯಮಾನ.
- ಸಿ.ಭೈರೇಗೌಡ, ರಾಜ್ಯ ಸಂಯುಕ್ತ ಜನತಾದಳದ ಅಧ್ಯಕ್ಷ

ಎರಡು ವರ್ಷದ ತಮ್ಮ ಸಾಧನೆಗಳ ಬಗ್ಗೆ ಕೃಷ್ಣ ಹೇಳುವುದು ಹೀಗೆ-
ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ, ನೀರಾವರಿ- ಕೃಷಿ ಕ್ಷೇತ್ರಕ್ಕೆ ಆದ್ಯತೆ, ಕಾರ್ಯಪಡೆಗಳ ರಚನೆ ಹಾಗೂ ಕನ್ನಡಪರ ನಿರ್ಧಾರಗಳನ್ನು ಕೈಗೊಂಡದ್ದು ನನ್ನ ಸರ್ಕಾರದ ಸಾಧನೆ. ಒಮ್ಮತದ ಮನೋಭೂಮಿಕೆಯ ಮೇಲೆ ರಾಜ್ಯಭಾರ ನಡೆಸಿದರೆ ನಿರಾತಂಕವಾಗಿ ನಡೀಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಜಂಬೂ ಸವಾರಿ ನಿರಂತರ.

ಈಗ ಹೇಳಿ, ಎಸ್‌.ಎಂ. ಕೃಷ್ಣ ಸರ್ಕಾರದ ಬಗ್ಗೆ ನೀವೇನಂತೀರಿ?

ನಮ್ಮ ಮಾತು : ಸಾಧಿಸಿರುವುದು ಸಾಸಿವೆಕಾಳಿನಷ್ಟಿದೆ, ಸಾಧಿಸಬೇಕಾಗಿರುವುದು ಬೆಟ್ಟದಷ್ಟಿದೆ. ಈ ನಡುವೆ ಕರ್ನಾಟಕದಲ್ಲಿ ಕೆಲಸ ಮಾಡುವ ಸರ್ಕಾರವೂ ಒಂದಿದೆ ಎಂದು ತೋರಿಸಿಕೊಟ್ಟ ಕೃಷ್ಣ ಅವರಿಗೆ ನಮ್ಮ ಕನ್ನಡ ವೆಬ್‌ಸೈಟ್‌ ಶುಭಾಶಯ.

- ಸಂಪಾದಕರು, /

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X