ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಆ್ಯಂಥ್ರಾಕ್ಸ್‌ !

By Staff
|
Google Oneindia Kannada News

Anthrax Sporesನವದೆಹಲಿ : ಅಮೆರಿಕನ್ನರನ್ನು ಕನಸು ಮನಸಿನಲ್ಲೂ ಕಾಡುತ್ತಿರುವ ಆ್ಯಂಥ್ರಾಕ್ಸ್‌ ವೈರಾಣು ಕರ್ನಾಟಕಕ್ಕೂ ಕಾಲಿಟ್ಟಿದೆ. ಕೋಲಾರದ ಅಳಗುರ್ಕಿಯಲ್ಲಿ ಇಬ್ಬರು ವ್ಯಕ್ತಿಗಳು ಆ್ಯಂಥ್ರಾಕ್ಸ್‌ ನಿಂದಾಗಿ ಮೃತಪಟ್ಟಿದ್ದಾರೆ.

ಸುಮಾರು ಒಂದೂವರೆ ತಿಂಗಳ ಹಿಂದೆ 20 ಕುರಿಗಳು, ಎತ್ತು ಮತ್ತು ಹಸುಗಳು ಕೂಡ ಈ ಆ್ಯಂಥ್ರಾಕ್ಸ್‌ಗೆ ಬಲಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯೂನಿಕೇಬಲ್‌ ಡಿಸೀಸಸ್‌(ಎನ್‌ಐಸಿಡಿ)ನ ಯುವಿಎಸ್‌ ರಾಣಾ ಹೇಳಿದ್ದಾರೆ.

ಜೈವಿಕ ಯುದ್ಧದ ಬೆದರಿಕೆಗಳ ಬಗ್ಗೆ ಎನ್‌ಐಸಿಡಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾರತದಲ್ಲಿ ಆ್ಯಂಥ್ರಾಕ್ಸ್‌ ಪರಿಸ್ಥಿತಿಯ ಬಗ್ಗೆ ರಾಣಾ ವರದಿ ಮಂಡಿಸಿದರು. ಆ್ಯಂಥ್ರಾಕ್ಸ್‌ ಗೆ ತುತ್ತಾದ ಪ್ರಾಣಿಗಳ ಮಾಂಸವನ್ನು ತಿಂದಿರುವುದರಿಂದ ಗ್ರಾಮಸ್ಥರು ಈ ರೋಗಕ್ಕೆ ಬಲಿಯಾದರು ಎಂದು ರಾಣಾ ತಿಳಿಸಿದ್ದಾರೆ.

ಭಾರತಕ್ಕೆ ಆ್ಯಂಥ್ರಾಕ್ಸ್‌ ವಾರ್ಷಿಕ ಅಭ್ಯಾಗತ

ಮಾಂಸ ಮಾರಾಟ ಕೇಂದ್ರಗಳ ಮೂಲಕವೂ ಆ್ಯಂಥ್ರಾಕ್ಸ್‌ ರೋಗಾಣು ಹರಡಬಹುದು. ಭಾರತದಲ್ಲಿ ಪ್ರತಿ ವರ್ಷವೂ ಆ್ಯಂಥ್ರಾಕ್ಸ್‌ ಕಾಣಿಸಿಕೊಳ್ಳುತ್ತದೆ ಮತ್ತು ಇವು ಹೆಚ್ಚಾಗಿ ರೋಗಪೀಡಿತ ಪ್ರಾಣಿಗಳ ಮಾಂಸ ತಿನ್ನುವುದರಿಂದಲೇ ಹರಡುತ್ತವೆ ಎಂದು ರಾಣಾ ವರದಿಯಲ್ಲಿ ವಿವರಿಸಿದ್ದಾರೆ.

1999ರಲ್ಲಿಯೂ ಆ್ಯಂಥ್ರಾಕ್ಸ್‌ ರೋಗ ಸೋಂಕಿದ ಎಂಟು ಪ್ರಕರಣಗಳು ಮೈಸೂರಿನಲ್ಲಿ ವರದಿಯಾಗಿದ್ದು , ಐವರು ವ್ಯಕ್ತಿಗಳು ಮೃತರಾಗಿದ್ದರು. ಮಿಡ್ನಾಪುರದ ಬಂದುಗುಟ್ಟು ಎಂಬಲ್ಲಿ ಆ್ಯಂಥ್ರಾಕ್ಸ್‌ ಗೆ 2000 ಪಶುಗಳು ಬಲಿಯಾಗಿದ್ದವು. ಮೇಕೆ ಮತ್ತು ಹಂದಿಗಳ ಸಾವೂ 2000 ದಾಟಿದೆ. ಅಲ್ಲದೆ ಆ ಹಳ್ಳಿಯ ಮೂವರು ವ್ಯಕ್ತಿಗಳೂ ಈ ಪ್ರಾಣಿಗಳ ಮಾಂಸ ತಿಂದು ಸಾವೀಗೀಡಾಗಿದ್ದಾರೆ.

ಪೋಸ್ಟ್‌ ನಲ್ಲಿ ಆ್ಯಂಥ್ರಾಕ್ಸ್‌ ಬರಬಹುದು, ಹುಷಾರ್‌!

ಪ್ರಾಣಿ ಲಸಿಕೆ ನೀಡುವ ವ್ಯವಸ್ಥೆಯು ದೇಶದಲ್ಲಿ ತೀರಾ ಕಳಪೆಯಾಗಿರುವುದೇ ಆ್ಯಂಥ್ರಾಕ್ಸ್‌ ನಿವಾರಣೆ ನಿಟ್ಟಿನಲ್ಲಿ ದೊಡ್ಡ ಅಡಚಣೆಯಾಗಿದೆ. ಆ್ಯಂಥ್ರಾಕ್ಸ್‌ ಏಕ ಕೋಶ ಬೀಜಗಳಲ್ಲಿ ಅದ್ದಿದ ಫಿಲ್ಟರ್‌ ಕಾರ್ಡ್‌ಗಳನ್ನು ಪೋಸ್ಟ್‌ ಮುಖಾಂತರ ಕಳುಹಿಸಿಯೂ ರೋಗ ಪ್ರಸರಣ ಮಾಡಬಹುದು.

ವಿಮಾನದ ಮೂಲಕ ಸ್ಪ್ರೇ ಮಾಡಿಯೂ ರೋಗವನ್ನು ಹರಡಬಹುದು ಎನ್ನುವ ವಿಷಯ ಆರೋಗ್ಯ ತಜ್ಞರನ್ನು ಕಳವಳಕ್ಕೀಡು ಮಾಡಿದೆ. ಕೆಲವು ದಿನಗಳ ಹಿಂದೆ ಔಷಧಿ ಸಿಂಪಡಿಸುವ ವಿಮಾನಗಳ ಮೂಲಕ ಒಸಾಮ ಬಿನ್‌ ಲ್ಯಾಡೆನ್‌ ಆ್ಯಂಥ್ರಾಕ್ಸ್‌ ದಾಳಿಯನ್ನು ಮಾಡಬಹುದೆನ್ನುವ ಭೀತಿಯಿಂದ ಅಮೆರಿಕಾ ಕೆಲಕಾಲ ಈ ವಿಮಾನಗಳ ಹಾರಾಟವನ್ನೆ ನಿಲ್ಲಿಸಿತ್ತು .

ಆ್ಯಂಥ್ರಾಕ್ಸ್‌ ಮಾರುವ ಅಂಗಡಿಗಳು ?

ಕಟುಕ, ಭಯೋತ್ಪಾದಕ ಒಸಾಮನ ಕೈಗೆ ಆ್ಯಂಥ್ರಾಕ್ಸ್‌ ಅಣುಜೀವಿಗಳು ಸಿಕ್ಕಿರುವ ಸಾಧ್ಯತೆಯೂ ಇದೆ ಎಂದು ಹೈದರಾಬಾದ್‌ನ ಅಣುಜೀವಶಾಸ್ತ್ರಜ್ಞೆ ಪುಷ್ಪ ಭಗವಾನ್‌ ಹೇಳುತ್ತಾರೆ. ಯಾಕೆಂದರೆ ಒಸಾಮಾ ರಷ್ಯನ್‌ ಮಾಫಿಯಾ ಜೊತೆಗೂ ಕೆಲಸ ಮಾಡಿದ್ದ ಸಂದರ್ಭದಲ್ಲಿ ಆ್ಯಂಥ್ರಾಕ್ಸ್‌ ಯುದ್ಧ ರೀತಿಯನ್ನು ತಿಳಿದುಕೊಂಡಿರಬಹುದು. ಇದಕ್ಕೆ ಪೂರಕವಾಗಿ, ಸೂರತ್‌ನಲ್ಲಿ (1994) ಪ್ಲೇಗ್‌ ರೋಗ ಹರಡಿದಾಗ ರಷ್ಯಾ, ಯುರೋಪ್‌, ಅಮೆರಿಕಾಗಳಲ್ಲಿ ಪ್ಲೇಗ್‌ ರೋಗಾಣುಗಳನ್ನು ಮಾರುವ ಸಂಸ್ಥೆಗಳನ್ನು ಎನ್‌ಐಸಿಡಿ ಪತ್ತೆ ಹಚ್ಚಿತ್ತು. ಈಗ ಆ್ಯಂಥ್ರಾಕ್ಸ್‌ ರೋಗಾಣು ಮಾರುವ ದುಷ್ಟ ಸಂಸ್ಥೆಗಳಿಲ್ಲ ಎಂದು ಹೇಗೆ ಹೇಳುವುದು ?

ಆ್ಯಂಥ್ರಾಕ್ಸ್‌ನ ಹಿಂದು ಮುಂದು

ಇದು ಸತ್ತ ಪ್ರಾಣಿಗಳ ಮಾಂಸದ ಮೂಲಕ ಹರಡುವ ರೋಗ. ಪ್ರದೇಶದಿಂದ ಪ್ರದೇಶಕ್ಕೆ ರೋಗ ಲಕ್ಷಣಗಳು ಭಿನ್ನವಾಗಿರುತ್ತವೆ. ಯಾವ ರೀತಿ ರೋಗ ಸೋಂಕಿದೆ ಎಂಬುದರ ಮೇಲೆಯೂ ರೋಗ ಲಕ್ಷಣದಲ್ಲಿ ವ್ಯತ್ಯಾಸವಿರುತ್ತದೆ. ಆರಂಭದಲ್ಲಿ ಶೀತ ಮತ್ತೆ ಒಂದು ವಾರದಲ್ಲಿ ವಿಪರೀತ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಚರ್ಮದ ಮೂಲಕ ರೋಗಾಣು ದೇಹ ಪ್ರವೇಶಿಸಿದ್ದರೆ, ತುರಿಸುವಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಆ್ಯಂಥ್ರಾಕ್ಸ್‌ ರೋಗಾಣುಗಳನ್ನು ತಿನಿಸಿನ ಮೂಲಕ ಸೇವಿಸಿದ್ದರೆ ಕರುಳಿನ ಸಮಸ್ಯೆಗಳು ಬರುತ್ತವೆ. ರಕ್ತ ವಾಂತಿ, ಹಸಿವಾಗದೇ ಇರುವುದು, ಸೊಂಟ ನೋವು -ಮುಖ್ಯ ಲಕ್ಷಣಗಳು.

ಆದಾಗ್ಯೂ ಮನುಷ್ಯನಿಂದ ಮನುಷ್ಯನಿಗೆ ಆ್ಯಂಥ್ರಾಕ್ಸ್‌ ಹರಡಿದ ವರದಿಯಿಲ್ಲ. ಪೆನ್ಸಿಲಿನ್‌ನಂತ ರೋಗ ನಿರೋಧಕಗಳಿಂದ ಆ್ಯಂಥ್ರಾಕ್ಸ್‌ ನಿವಾರಿಸಬಹುದು ಆದರೂ ರೋಗ ಬಂದ ವಾರದೊಳಗೆ ಸರಿಯಾದ ಚಿಕಿತ್ಸೆಯಾಗಬೇಕು. ಆ್ಯಂಥ್ರಾಕ್ಸ್‌ ವ್ಯಾಕ್ಸಿನ್‌ಗಳೂ ಲಭ್ಯವಿವೆ.

(ಪಿಟಿಐ/ಇನ್ಫೋ ವಾರ್ತೆ)

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X