ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಾಸಿಗಳೇ ಕಠಿಣ ದಿನಗಳನ್ನು ಎದುರಿಸಲು ಸಜ್ಜಾಗಿ : ಅಟಲ್‌

By Staff
|
Google Oneindia Kannada News

ನವದೆಹಲಿ : ಅಮೆರಿಕ ಮೇಲಿನ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಕಠಿಣ ದಿನಗಳನ್ನು ಎದುರಿಸಲು ಸಜ್ಜಾಗುವಂತೆ ದೇಶದ ಜನತೆಗೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕರೆ ನೀಡಿದ್ದಾರೆ. ಆರ್ಥಿಕ ಹಿನ್ನಡೆಯಿಂದ ಉಂಟಾಗಿರುವ ಗಾಯದ ಮೇಲೆ ಅಮೆರಿಕ ಮೇಲಿನ ದಾಳಿ ಬರೆ ಹಾಕಿದೆ. ಇದರಿಂದ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಮೇಲೆ ಸೆಪ್ಟೆಂಬರ್‌ 11ರಂದು ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡಿದ ಅವರು, ಈ ದುರ್ಘಟನೆಯಲ್ಲಿ ತಮ್ಮ ಜೀವ ಕಳೆದುಕೊಂಡವರ ಆತ್ಮಕ್ಕೆ ಈಶ್ವರನು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

ಭಾರತ ಕಳೆದ ಕೆಲವು ದಶಕಗಳಿಂದಲೂ ಭಯೋತ್ಪಾದನೆಯನ್ನು ಎದುರಿಸುತ್ತಲೇ ಇದೆ. ಜಮ್ಮು -ಕಾಶ್ಮೀರದಲ್ಲಿ ಅಮಾಯಕರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈಗ ಭಯೋತ್ಪಾದಕರು ಅಮೆರಿಕದ ಮೇಲೂ ದಾಳಿ ಮಾಡಿದ್ದಾರೆ.

ಭಯೋತ್ಪಾದನೆ ಎಂಬುದು ಯಾವುದೇ ದೇಶಕ್ಕಾದರೂ ಅತಿ ದೊಡ್ಡ ಶತ್ರು. ವಿಶ್ವ ಸಮುದಾಯ ಸಂಘಟಿತವಾಗಿ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕು. ಭಾರತವು ಈ ಅಂಶವನ್ನು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬಂದಿದೆ ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ಅಮೆರಿಕದ ಜನತೆಯ ಕಷ್ಟಸುಖದಲ್ಲಿ ನಾವೂ ಭಾಗಿಗಳು, ಸಮಸ್ತ ಭಾರತೀಯರು ಅಮೆರಿಕದ ಜತೆಗಿದ್ದೇವೆ ಎಂದ ಅವರು, ಗಡಿಯಾಚೆಯ ಭಯೋತ್ಪಾದನೆ ಹತ್ತಿಕ್ಕಲು ವಿಶ್ವವೇ ಒಂದಾಗಬೇಕು ಎಂದು ಕರೆ ನೀಡಿದರು. ಅಮೆರಿಕದಲ್ಲಿ ಈಹೊತ್ತು ನಡೆದಿರುವ ದುರ್ಘಟನೆ ನಮಗೂ ಒಂದು ನೇರ ಪಾಠವಾಗಿದೆ ಎಂದರು.

ಈ ಪರಿಸ್ಥಿತಿಯಲ್ಲಿ ಇಡೀ ರಾಷ್ಟ್ರವೇ ಎಚ್ಚರದಿಂದಿರಬೇಕು. ದೇಶದ ಜನತೆ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಸಹಕರಿಸಬೇಕು. ಅಮೆರಿಕದಲ್ಲಿ ನಡೆದಿರುವ ಘಟನಾವಳಿಗಳಿಂದ ದೇಶದ ಆರ್ಥಿಕತೆಯ ಮೇಲೂ ಒತ್ತಡ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ನಾವು ಕಠಿಣ ಹಾಗೂ ನಿಷ್ಠುರ ನಿಲುವು ತಳೆಯಬೇಕಾದೀತು ಎಂದರು.

ತೈಲ ಬೆಲೆಗಳ ಮೇಲೂ ಈ ದಾಳಿಯ ದುಷ್ಪರಿಣಾಮ ಬೀರಿದೆ. ನೇರ ಬಂಡವಾಳ ಹೂಡಿಕೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದರು. ಮುಂಬೈನಲ್ಲಿ ಕೂಡ ಸರಣಿ ಬಾಂಬ್‌ ಸ್ಫೋಟ ನಡೆದಿತ್ತು. ಆಗಿಲೂ ದೇಶ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆ ನೀಡಿತ್ತು. ಈಗಲೂ ನಾವು ಅದನ್ನೇ ಪ್ರತಿಪಾದಿಸುತ್ತೇವೆ. ವಿಶ್ವ ಒಂದಾಗಿ ಹೋರಾಡಿದರೆ ಭಯೋತ್ಪಾದನೆ ಹತ್ತಿಕ್ಕಲು ಸಾಧ್ಯ ಎಂದರು.

ಭಾರತವು 90 ಸಾವಿರ ಕೋಟಿ ರುಪಾಯಿಗಳನ್ನು ತೈಲ ಆಮದಿಗಾಗಿ ವ್ಯಯಿಸುತ್ತಿದೆ. ಬ್ಯಾರಲ್‌ಗೆ ಒಂದು ಡಾಲರ್‌ ಹೆಚ್ಚಳವಾದರೂ ಅದು ನಮ್ಮ ಆಮದು ವೆಚ್ಚಕ್ಕೆ 3,600 ಕೋಟಿ ರುಪಾಯಿಗಳ ಹೊರೆಯನ್ನು ಉಂಟು ಮಾಡಲಿದೆ ಎಂದರು.

ಖಂಡನೆ : ಭಯೋತ್ಪಾದಕರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವಾಗುತ್ತಿರುವ ರಾಷ್ಟ್ರದ ಕ್ರಮವನ್ನು ಅವರು ಖಂಡಿಸಿದರು. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಇಡೀ ವಿಶ್ವವೇ ಒಂದಾಗಬೇಕು ಎಂದು ಅವರು ಪುನರುಚ್ಚರಿಸಿದರು.

(ಪಿ.ಟಿ.ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X