ಸೆ.1ರಿಂದ ಬೆಂಗಳೂರು-ಜರ್ಮನಿ ನಡುವೆ ನಾನ್‌ಸ್ಟಾಪ್ ವಿಮಾನಯಾನ
ಬೆಂಗಳೂರು : ಜರ್ಮನಿಯ ಫ್ರಾಂಕ್ ಫರ್ಟ್ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಡುವೆ ಪ್ರಪ್ರಥಮ ನಾನ್‌ಸ್ಟಾಪ್ ವಿಮಾನಯಾನ ಆರಂಭವಾಗಿದೆ. ಲುಫ್ತಾನ್ಸಾ ಏರ್‌ಲೈನ್ಸ್ ನ ಪ್ರಥಮ ವಿಮಾನ ಶನಿವಾರ ರಾತ್ರಿ11.20ಕ್ಕೆ ಬೆಂಗಳೂರಿನಲ್ಲಿ ಬಂದಿಳಿಯಲಿದೆ.
ಬೆಂಗಳೂರು ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಿದ ನಂತರ ಹಲವು ಏರ್‌ಲೈನ್ಸ್‌ಗಳು, ಹೊರದೇಶಗಳಿಗೆ ವಿಮಾನ ಸಂಚಾರ ಆರಂಭಿಸಿದ್ದವು. ಆದರೆ ಯುರೋಪ್ ದೇಶಕ್ಕೆ ಹಾರುವ ಪ್ರಥಮ ನಾನ್‌ಸ್ಟಾಪ್ ವಿಮಾನಯಾನ ಸೇವೆ ಆರಂಭಿಸಿದ ಕೀರ್ತಿ ಲುಫ್ತಾನ್ಸಾದ್ದಾಗಿದೆ.
ವಾರಕ್ಕೆ ಆರು ಬಾರಿ ಟೇಕಾಫ್ ತೆಗೆದುಕೊಳ್ಳಲಿರುವ ಲುಫ್ತಾನ್ಸಾ ಸಂಸ್ಥೆಯ ನಾನ್ ಸ್ಟಾಪ್ ವಿಮಾನಗಳು, ವಾರದ ಮೂರು ದಿನಗಳಲ್ಲಿ ಅಂದರೆ, ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಲ್ಲಿ ಬೆಳಗ್ಗೆ 7.35ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ 1.20 ಕ್ಕೆ ಫ್ರಾಂಕ್‌ಫರ್ಟ್ ತಲುಪಲಿದೆ.
ಫ್ರಾಂಕ್‌ಫರ್ಟ್‌ನಿಂದ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 10.25ಕ್ಕೆ ಹೊರಡುವ ವಿಮಾನ ಅಂದೇ ರಾತ್ರಿ 11.20ಕ್ಕೆ ಬೆಂಗಳೂರು ತಲುಪಲಿದೆ. ಎಕಾನಮಿ ಕ್ಲಾಸ್‌ನಲ್ಲಿ ಟಿಕೆಟ್ ದರ 47ಸಾವಿರ ರೂಪಾಯಿಗಳಾಗುತ್ತದೆ. ಆದರೆ ಉದ್ಘಾಟನೆಯ ಸಂದರ್ಭದ ಕೊಡುಗೆಯಾಗಿ ಟಿಕೆಟ್ ದರದ ಮೇಲೆ ಶೇ 30ರಷ್ಟು ಕಡಿತ ನೀಡಲಾಗಿದೆ.
(ಇನ್ಫೋ ವಾರ್ತೆ)












Click it and Unblock the Notifications