ಏಳು ತಿಂಗಳಲ್ಲಿ 7500 ಕೋಟಿ ರು. ಸಾಫ್ಟ್‌ವೇರ್ ರಫ್ತು : ನಾಣಯ್ಯ
ಬೆಂಗಳೂರು : 2001-02ನೇ ಸಾಲಿನಲ್ಲಿ 11,000 ಕೋಟಿ ರುಪಾಯಿಗಳ ಸಾಫ್ಟ್‌ವೇರ್ ರಫ್ತು ಗುರಿ ಹೊಂದಲಾಗಿದ್ದು, ಮೊದಲ 7 ತಿಂಗಳ ಅವಧಿಯಲ್ಲಿ 7,100 ಕೋಟಿ ರುಪಾಯಿ ತಂತ್ರಾಂಶ ಹಾಗೂ 400 ಕೋಟಿ ರುಪಾಯಿ ಯಂತ್ರಾಂಶ (ಹಾರ್ಡ್‌ವೇರ್) ರಫ್ತು ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ನಾಣಯ್ಯ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ನವೆಂಬರ್ 1ರಿಂದ 5ರವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ಮಾಹಿತಿ ತಂತ್ರಜ್ಞಾನ ಮೇಳ ನಡೆಯುತ್ತಿದ್ದು, ದೇಶ ವಿದೇಶಗಳ 300 ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿವೆ ಎಂದರು.
ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದ ಪರಿಣಾಮ ಐ.ಟಿ. ಮೇಳದ ಮೇಲೆ ಉಂಟಾಗುವುದಿಲ್ಲ ಎಂದ ಅವರು, 2005ನೆ ಇಸವಿವರಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೇಲೆ ಯಾವುದೇ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ, ಮೈಸೂರು, ಮಣಿಪಾಲ ಹಾಗೂ ಮಂಗಳೂರಿನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಪ್ರಾರಂಭವಾಗಲಿದ್ದು, ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಆರಂಭಿಸಲು ಕೆ.ಎಲ್.ಇ. ಸೊಸೈಟಿ ಮುಂದೆ ಬಂದಿದೆ ಎಂದು ಸಚಿವರು ವಿವರಿಸಿದರು.












Click it and Unblock the Notifications