ಗೋವಾ, ಒರಿಸ್ಸಾಗಳಿಂದಲೂ ವಿದ್ಯುತ್ ಖರೀದಿ ನಿರ್ಧಾರ
ಬೆಂಗಳೂರು : ಮುಂದಿನ ಐದು ತಿಂಗಳ ಅವಧಿಯವರೆಗೆ ಕರ್ನಾಟಕಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಲು ಎನ್ರಾನ್ ಸಂಸ್ಥೆ ಸಮ್ಮತಿಸಿದೆ. ಈ ವಿಷಯವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ವಿದ್ಯುತ್ ಕ್ಷೇತ್ರದ ದೈತ್ಯ ಎನ್ರಾನ್ ಇತರೆ ಖಾಸಗಿ ವಿದ್ಯುತ್ ಕಂಪನಿಗಳು ಪೂರೈಸುವ ದರಕ್ಕಿಂತ ಕಡಿಮೆ ದರದಲ್ಲಿ ಅಂದರೆ ಯುನಿಟ್‌ಗೆ 2ರಿಂದ 3 ರುಪಾಯಿಗಳ ದರದಲ್ಲಿ ವಿದ್ಯುತ್ ಪೂರೈಸಲು ಒಪ್ಪಿದೆ ಎಂದು ಅವರು ಹೇಳಿದರು. ಕೆ.ಪಿ.ಟಿ.ಸಿ.ಎಲ್‌ನ ವೆಬ್ ಸೈಟ್ ಉದ್ಘಾಟನಾ ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಗೋವಾ, ಒರಿಸ್ಸಾ ರಾಜ್ಯಗಳಿಂದಲೂ ವಿದ್ಯುತ್ ಖರೀದಿಸಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ. ಗೋವಾ 80ರಿಂದ 100 ಮೆಗಾವ್ಯಾಟ್ ವಿದ್ಯುತ್ ಪೂರೈಸಲು ಮುಂದಾಗಿದೆ ಎಂದೂ ಅವರು ಹೇಳಿದರು. ತಣ್ಣೀರುಬಾವಿ, ಟಾಟಾ ಕಂಪನಿ ಹಾಗೂ ರಾಯಲ್‌ಸೀಮೆ ಕಂಪನಿಗಳಿಂದ ರಾಜ್ಯಕ್ಕೆ 3.50ರಿಂದ 4 ರುಪಾಯಿ ದರದಲ್ಲಿ ಒಟ್ಟು 370 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದೂ ಬಳಿಗಾರ್ ಹೇಳಿದರು.
ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನಿಭಾಯಿಸಲು ಎನ್ರಾನ್‌ನೊಂದಿಗೆ ಮಾತುಕತೆಗಳು ನಡೆದ ಸಂದರ್ಭದಲ್ಲಿ ಸಂಸ್ಥೆಯು ಕರ್ನಾಟಕಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುವ ಭರವಸೆ ನೀಡಿತು ಎಂದು ಅವರು ವಿವರಿಸಿದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications