ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

55ನೇ ಸ್ವಾತಂತ್ರ್ಯೋತ್ಸವ : ರಾಜ್ಯಾದ್ಯಂತ ಬಿಗಿ ಬಂದೋಬಸ್ತ್‌

By Staff
|
Google Oneindia Kannada News

ಬೆಂಗಳೂರು : ಬುಧವಾರ ಆಚರಿಸಲಾಗುತ್ತಿರುವ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಸೂಕ್ಷ್ಮ ಪ್ರದೇಗಳಲ್ಲಿ ವ್ಯಾಪಕ ಬಂದೋಬಸ್ತ್‌ ಏರ್ಪಡಿಸಲಾಗಿದೆ. ರಾಜ್ಯದ ಯಾವುದೇ ಸಮಾರಂಭದ ಮೇಲೆ ಭಯೋತ್ಪಾದಕರು ಅಥವಾ ಪ್ರತ್ಯೇಕತಾ ವಾದಿಗಳು ದಾಳಿ ನಡೆಸುವ ಬಗ್ಗೆ ಗುಪ್ತದಳದಿಂದ ಮಾಹಿತಿ ಬಂದಿಲ್ಲವಾದರೂ, ಯಾವುದೇ ಅಪಾಯವನ್ನು ತಂದುಕೊಳ್ಳಲು ನಾವು ಸಿದ್ಧರಿಲ್ಲ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟೆಚ್ಚರದಿಂದಿರಲು ಸೂಚಿಸಲಾಗಿದ್ದು, ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಕ್ಕಾಗಲೀ ಅಥವಾ ಛಾಯಾಚಿತ್ರ ತೆಗೆಯಲು ಪತ್ರಿಕಾ ಛಾಯಾಗ್ರಾಹಕರನ್ನು ಹೊರತು ಪಡಿಸಿ ಮತ್ತಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದಲೇ ಬೆಂಗಳೂರೂ ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿರುವ ಕೇಂದ್ರ ಸರಕಾರಿ ಕಚೇರಿಗಳು ಹಾಗೂ ವಿವಿಧ ಸೇನಾಪಡೆ ಕಚೇರಿಗಳ ಸುತ್ತಮುತ್ತ ವಿಶೇಷ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಬಹುಮಹಡಿ ಕಟ್ಟಡಗಳ ಮೇಲೆ ಕುಳಿತ ಪೊಲೀಸರು ಹಲವು ಪಾಳಿಗಳಲ್ಲಿ ದುಷ್ಕರ್ಮಿಗಳ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಟ್ಟಿದ್ದಾರೆ.

ರಾಜ್ಯದ ಪ್ರಮುಖ ರೈಲು ನಿಲ್ದಾಣ, ಬಸ್‌ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕೂಡ ವ್ಯಾಪಕ ಬಂದೋಬಸ್ತ್‌ ಮಾಡಲಾಗಿದೆ. ಸಂಶಯಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳನ್ನು ತಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ತಡೆಗೋಡೆ ಇಟ್ಟು, ಹೊರಗಡೆಯಿಂದ ನಗರ ಪ್ರವೇಶಿಸುವ ವಾಹನಗಳ ತಪಾಸಣೆಯಲ್ಲಿ ಪೊಲೀಸರು ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿ ಬಂದೋಬಸ್ತ್‌ಗಾಗಿ ಸಿವಿಲ್‌ ಪೊಲೀಸರೊಂದಿಗೆ ಕೆಎಸ್‌ಆರ್‌ಪಿ, ಪಿಎಆರ್‌ ಮತ್ತು 12 ಪ್ಲಟೂನ್‌ಗಳನ್ನು ನಿಯೋಜಿಸಲಾಗಿದೆ. ರಾಜ್ಯದ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್‌ ಏರ್ಪಡಿಸಲು ಸೂಚಿಸಿದ್ದಾರೆ. ಹೀಗಾಗಿ ನಗರದಲ್ಲೆಲ್ಲಾ ಗಸ್ತು ತಿರುಗುತ್ತಿರುವ ಶಸ್ತ್ರಧಾರಿ ಪೊಲೀಸರೇ ಕಾಣಿಸುತ್ತಿದ್ದಾರೆ.

ಎಂ.ಜಿ. ರಸ್ತೆಯ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಶಾ ಮೈದಾನದಲ್ಲಿ ಬುಧವಾರ ಬೆಳಗ್ಗೆ ಸ್ವಾಂತ್ರ್ಯೋತ್ಸವ ಕಾರ್ಯಕ್ರಮ ಜರುಗುತ್ತಿದ್ದು, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟೆಚ್ಚರದಿಂದಿರಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರದ ಪೊಲೀಸ್‌ ಆಯುಕ್ತ ಮಡಿಯಾಳ್‌ ತಿಳಿಸಿದ್ದಾರೆ.

(ಯು.ಎನ್‌.ಐ./ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X