ಬೆಲೆ ಕುಸಿತದಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರನ ಕೇಳುವವರಾರು?
ಮಂಗಳೂರು : ಒಂದೆಡೆ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಕೈಕೊಟ್ಟು, ಬೆಳೆ ಇಲ್ಲದೆ ರೈತರು ಪರಿತಪಿಸುತ್ತಿದ್ದರೆ, ಯಥೇಚ್ಛವಾಗಿ ಮಳೆ ಸುರಿಯುತ್ತಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅಡಿಕೆ ಬೆಳೆಗಾರರು, ಬೆಲೆ ಕುಸಿತದಿಂದ ಕಂಗೆಟ್ಟು, ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಪ್ರಸಕ್ತ ವರ್ಷ ಅಡಿಕೆ ಧಾರಣೆ ಕುಸಿಯುತ್ತಲೇ ಬಂದಿದೆ. ಆರಂಭದಲ್ಲಿ ಕೆ.ಜಿ.ಗೆ 80 ರುಪಾಯಿ ಇದ್ದ ಬೆಲೆ ಈಗ 40-50 ರುಪಾಯಿ ನಡುವೆ ಇದೆ. ಅಡಿಕೆ ಬೆಳೆಗಾರನ ಸಂಕಷ್ಟವನ್ನು ಅರ್ಥೈಸಿಕೊಂಡ ಸಹಕಾರಿ ಬ್ಯಾಂಕ್‌ಗಳು ಕಳೆದ ವರ್ಷ ತಾವು ನೀಡಿದ ಸಾಲಕ್ಕೆ ಕೇವಲ ಬಡ್ಡಿಯನ್ನು ಮಾತ್ರ ಪಡೆದು, ಅಸಲನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಿರುವುದರಿಂದ ರೈತ ಕೊಂಚ ನಿಟ್ಟುಸಿರು ಬಿಟ್ಟಿದ್ದಾನೆ.
ಕಚ್ಚಾ ಅಡಿಕೆ, ನೀರು ಅಡಿಕೆಯ ಬೆಲೆಯೂ ಪ್ರಪಾತಕ್ಕೆ ಇಳಿದಿದೆ. ಮಳೆಗಾಲದಲ್ಲಿ ಬೀಳುವ ಹಣ್ಣಡಕೆಯನ್ನು ಡೈಯರ್‌ನಲ್ಲಿ ಒಣಗಿಸಿ ಮಾರುಕಟ್ಟೆಗೆ ತರಲಾಗುತ್ತಿದೆ. ಇದರ ಬೆಲೆಯೂ ಈ ವಾರ ಸುಮಾರು 3 ರುಪಾಯಿ ಕುಸಿದಿದೆ. ಬೆಲೆ ಕುಸಿತದ ಜೊತೆಗೆ ಅಡಿಕೆ ಕೊಳ್ಳುವವರೇ ಇಲ್ಲದ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಈಗಲೇ ಹೀಗಾದರೆ, ಡಿಸೆಂಬರ್‌ವೇಳೆಗೆ ಬರುವ ಕೊಯ್ಲಿನ ಅಡಿಕೆಯ ಸ್ಥಿತಿ ಏನಾದೀತೋ ಎಂದು ರೈತ ಈಗಲೇ ಆತಂಕದ ಮಡುವಿನಲ್ಲಿ ಮುಳುಗಿದ್ದಾನೆ. ಬೆಲೆ ಕುಸಿತದ ಆಘಾತಕ್ಕೆ ಒಳಗಾಗಿರುವ ರೈತರಲ್ಲಿ ಅಡಿಕೆ ಗಿಡದ ಬುಡ ಬಿಡಿಸಿ, ಸೊಪ್ಪು ಮಾಡುವ ಉತ್ಸಾಹವೂ ಉಳಿದಿಲ್ಲ.
ಕೆಲವೇ ವರ್ಷಗಳ ಹಿಂದೆ ಅತ್ಯಂತ ಲಾಭದಾಯಕ ಬೆಳೆ ಎಂಬ ಖ್ಯಾತಿ ಪಡೆದಿದ್ದ ಅಡಿಕೆ ಇಂದು ರೈತನ ಕೈ ಸುಡುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ಆಳುಗಳ ಕೂಲಿಯೂ ಕಡಿಮೆ ಆಗಿದೆ. ಕೆಲಸವೂ ದೊರಕದ ಪರಿಸ್ಥಿತಿ ನಿರ್ಮಾಣವಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಐಷಾರಾಮದ ಜೀವನ ನಡೆಸುತ್ತಿದ್ದ ಅಡಿಕೆ ಬೆಳೆಗಾರನ ಜೀವನ ಮಟ್ಟವೇ ಕುಸಿದಿದೆ. ಕಂಗೆಟ್ಟಿರುವ ಅಡಿಕೆ ಬೆಳೆಗಾರನ ರಕ್ಷಿಸುವವರಾರು?
ಮಾರಾಟ ತೆರಿಗೆ ರದ್ದು : ಈ ಮಧ್ಯೆ ಅಡಿಕೆ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಅಡಿಕೆ ಮಾರಾಟದ ಮೇಲೆ ವಿಧಿಸಲಾಗಿರುವ ಶೇ.4ರಷ್ಟು ಮಾರಾಟ ತೆರಿಗೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಕೂಡ ರಾಜ್ಯ ಸರಕಾರ ಚಿಂತಿಸುತ್ತಿದೆ. ಅತಿ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...