ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ ಮಹಾಲಕ್ಷ್ಮಿ ಹಬ್ಬದ ಕೊಡುಗೆ-1 ಗುಲಾಬಿಗೆ ಐದೇ ರುಪಾಯಿ!

By Staff
|
Google Oneindia Kannada News

ಮುಖದೋರದ ಸೂರ್ಯ. ಕುಂಭದ್ರೋಣದ ನಂತರ ಸೋನ್‌ ಪಪ್ಪಡಿ ಮಳೆ. ಮಾರುಕಟ್ಟೆ ಅಕ್ಷರಶಃ ಕೆಸರುಗದ್ದೆ. ಆದರೂ ವ್ಯಾಪಾರದ ಭರಾಟೆ ಜೋರೋ ಜೋರು. ವರ ಮಹಾಲಕ್ಷ್ಮಿ ಬರಬರುತ್ತಾ ದುಬಾರಿಯಾಗುತ್ತಿದ್ದಾಳೆ ಎಂಬ ಗೊಣಗು ಭಕ್ತರಿಂದ. ಆದರೂ ಹಬ್ಬ, ಬಿಡೋಕಾಗುತ್ತದೆಯೇ ? ಬೆಂಗಳೂರಿನ ವ್ಯಾಪಾರಿಗಳಿಗೆ ಗುರುವಾರ ಸಂಜೆಯಿಂದಲೇ ಲಕ್ಷ್ಮಿ ಯದ್ವಾತದ್ವಾ ಒಲಿದುಬಿಟ್ಟಿದ್ದಾಳೆ. ದರದ ನಮೂನೆಗೆ ಪಕ್ಕಾ ಉದಾಹರಣೆ- ಒಂದು ಗುಲಾಬಿ ಹೂವಿನ ಬೆಲೆ ಕೇವಲ 5 ರುಪಾಯಿ !

ಸೌತೆ, ಮೂಲಂಗಿ ಬಿಟ್ಟು ಯಾವ ತರಕಾರಿಯ ಬೆಲೆಯೂ ಪ್ರತಿ ಕಿಲೋಗೆ 10 ರುಪಾಯಿಗಿಂತ ಕಡಿಮೆ ಇಲ್ಲ. ತೆಂಗಿನ ಕಾಯಿಯೂ (ಇದೇ ಲಕ್ಷ್ಮಿ ಅಲ್ಲವೇ?) ವ್ಯಾಪಾರಿಗಳ ಮನಸೋ ಇಚ್ಛೆ ಬೆಲೆಯನ್ನು ಪಡಕೊಂಡು ನಗುತ್ತಿದೆ. ಸೈಜಿಗೆ ತಕ್ಕಂತೆ ದರದಲ್ಲಿ 2 ರಿಂದ 3 ರುಪಾಯಿ ಹೆಚ್ಚಳ. ವರ ಮಹಾಲಕ್ಷ್ಮಿ ವ್ರತಕ್ಕೆ ಅಗತ್ಯವಾದ ಹೂ- ಪತ್ರೆಗಳನ್ನು ಎಷ್ಟೇ ಕೈ ಬಿಗಿ ಮಾಡಿ ತಂದರೂ ಬರೋಬ್ಬರಿ 300 ರುಪಾಯಿ. ಇನ್ನು ಹಣ್ಣು - ತಣ್ಣಗಾಗುವಂತೆ ತೋರುತ್ತಿದ್ದ ಸೇಬಿನ ಬೆಲೆ ಮತ್ತೆ ಆಕಾಶ ಮುಟ್ಟತೊಡಗಿದೆ. ಆಸ್ಟ್ರೇಲಿಯನ್‌ ಸೇಬು ಕಿಲೋಗೆ 80- 85 ರುಪಾಯಿ. ಅಂದ ಮೇಲೆ 300- 350 ರುಪಾಯಿಗೆ ಕಡಿಮೆಯಲ್ಲಿ ಲಕ್ಷ್ಮಿಗೆ ಹಣ್ಣಿನ ನೈವೇದ್ಯ ಆಗದು.

ಶ್ರಾವಣ ಸಡಗರದ ತಿಂಗಳು. ಆದರೆ ಅದು ಈ ಪಾಟಿ ದುಬಾರಿಯಾದರೆ ? ಒಂದು ವರ ಮಹಾಲಕ್ಷ್ಮಿಗೆ ಬೆಂಗಳೂರಿನ ಪುಟ್ಟ ಸಂಸಾರ ಏನಿಲ್ಲವೆಂದರೂ 2 ಸಾವಿರ ರುಪಾಯಿ ಖರ್ಚು ಮಾಡಬೇಕು. ಕೆಳ ಮಧ್ಯಮ ವರ್ಗದ ತಿಂಗಳ ಪಗಾರಿನ ಅರ್ಧ ಭಾಗ ಇದು, ಸ್ವಾಮಿ. ಹಾಗಂತ ವ್ರತ ಬಿಡೋಕಾಗಲ್ಲ. ಇದಿನ್ನೂ ಆರಂಭ. ಇನ್ನೇನು ಗಣೇಶ ಬರುತ್ತಾನೆ; ಮಂತ್‌ ಎಂಡಿನ ಜೊತೆಗೆ. ಕಿಸೆಯಲ್ಲಿ ಈಗೇನೋ ಪಗಾರ ತುಂಬಿದೆ. ಆದರೆ ಗಣೇಶನಿಗೆ ಏನು ಮಾಡುವುದು ?- ಇಂಥಾ ದೂರಾಲೋಚನೆ ಮಾಡುತ್ತಾ , ಕಾಲಕ್ಕೆ ಹಿಡಿ ಶಾಪ ಹಾಕುತ್ತಾ ಭಕ್ತಾದಿಗಳು ಹಬ್ಬದಲ್ಲಿ ಮುಳುಗಿದ್ದಾರೆ.

ಹೂ ಮಾರುವಾಕೆ ಬಗಲಲ್ಲೇ ಕೂಗುತ್ತಿದ್ದಾಳೆ- ಮಲ್ಲಿಗೆ, ಮೊಲ್ಲೆ, ಕನಕಾಂಬರ, ಸೇವಂತಿ... ಹಾಕುವ ಮೊಳ ಇಷ್ಟಾದರೆ, ಬೆಲೆ ಅಷ್ಟು ! ಮಳೆರಾಯನನ್ನೂ ಕರೆ ತಂದಿರುವ ಲಕ್ಷ್ಮಿ, ಶ್ರಾವಣದ ಮುಂಬರುವ ಹಬ್ಬಗಳಲ್ಲಾದರೂ ದರ ಇಳಿಕೆಯ ಗಾಳಿ ತರಲಿ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X